Wednesday 5 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 164 - 175

ಅಥಾsಸಸಾದ ಸೌಭರಾಡ್ ಹರಿಂ ಶರಾಮ್ಬುವರ್ಷಣಃ ।

ಹರಿಃ ಶರಂ ಯಮೋಪಮಂ ಮುಮೋಚ ತಸ್ಯ ವಕ್ಷಸಿ ॥೧೭.೧೬೪॥

ರುಗ್ಮಿ ಸೋತನಂತರ ಸಾಲ್ವ ಬಾಣಮಳೆಗರೆಯುತ್ತಾ ಕೃಷ್ಣನೆಡೆ ಬಂದ ,

ಕೃಷ್ಣ ಯಮದಂಡದಂಥ ಭೀಕರ ಬಾಣವನ್ನು ಸಾಲ್ವನ ಎದೆಗೆ ಎಸೆದ .

 

ಶರೇಣ ತೇನ ಪೀಡಿತಃ ಪಪಾತ ಮನ್ದಚೇಷ್ಟಿತಃ ।

ಚಿರಾತ್ತಸಙ್ಜ್ಞಕೋsಗಮತ್ ತ್ರಿನೇತ್ರತೋಷಣೇಚ್ಛಯಾ ॥೧೭.೧೬೫॥

ಸಾಲ್ವ ಗಾಯಗೊಂಡು ಮೂರ್ಛೆಹೋಗಿ ಬಿದ್ದ ,

ಎದ್ದು ರುದ್ರನೊಲಿಸುವ ತಪಕ್ಕೆ ಕಾಡಿಗೆ ನಡೆದ .

 

ಸಮಸ್ತರಾಜಸನ್ನಿಧಾವಯಾದವಾಂ ಮಹೀಮಹಮ್ ।

ಕರಿಷ್ಯ ಇತ್ಯುದೀರ್ಯ ಸ ವ್ಯಧಾತ್ ತಪೋsತಿದುಶ್ಚರಮ್ ॥೧೭.೧೬೬॥

ಎಲ್ಲ ರಾಜರೆದುರು ಸಾಲ್ವ ಪ್ರತಿಜ್ಞೆಗೈದ-ಭೂಮಿಯ ಮಾಡುವೆ ಯಾದವರಹಿತ ,

ಪ್ರತಿಜ್ಞೆಯ ನಂತರ ಸಾಲ್ವ ತಾನಾದ ಅತ್ಯಂತ ದುಶ್ಚರವಾದ ತಪೋನಿರತ .

 

ಅಥೋ ವಿವೇಶ ಕೇಶವಃ ಪುರೀಂ ಕುಶಸ್ಥಲೀಂ ವಿಭುಃ ।

ಪ್ರಿಯಾಯುತೋsಬ್ಜಜಾದಿಭಿಃ ಸಮೀಡಿತಃ ಸುರೇಶ್ವರೈಃ  ॥ ೧೭.೧೬೭॥

ಆನಂತರ ಸರ್ವಸಮರ್ಥನಾದ ಕೇಶವ ರುಗ್ಮಿಣೀ ಸಮೇತ ,

ಆಗುತ್ತಿರಲಾಗಿ ಬ್ರಹ್ಮಾದಿ ದೇವತೆಗಳೆಲ್ಲರಿಂದ ತಾನು ಸ್ತುತ ,

ದ್ವಾರಕಾಪಟ್ಟಣ ಪ್ರವೇಶಿಸಿದ ಆಗ ಸ್ವಾಮಿ ದ್ವಾರಕಾನಾಥ .

 

ಪುರಾ ತತೋ ಹಲಾಯುಧಃ ಪ್ರಿಯಾಂ ನಿಜಾಂ ಪುರಾSಪಿ ಹಿ ।

ಸ ವಾರುಣೀಸಮಾಹ್ವಯಾಮವಾಪ ರೈವತೀಂ ವಿಭುಃ ॥೧೭.೧೬೮ ॥

ಈ ಮೊದಲು ಬಲರಾಮನ ಮೂಲರೂಪದಲ್ಲಿ ವಾರುಣಿಯೇ ಅವನ ಸತಿ ,

ರೇವತರಾಜನ ಮಗಳು ಬಲರಾಮನ ಹೆಂಡತಿಯಾಗಿ ಬಂದವಳು ರೇವತಿ .

(ಈ ಹಿನ್ನೆಲೆಯಲ್ಲಿರುವ ಕಥೆಯನ್ನು ವಿವರಿಸುತ್ತಾರೆ)

 

ಪತಿಂ ಯಥಾsನುರೂಪಿಣಂ ತದೀಯಮೇವ ಪೂರ್ವಕಮ್ ।

ಪಿತಾ ತದೀಯ ಐಚ್ಛತ ಪ್ರವೇತ್ತುಮಬ್ಜಸಮ್ಭವಾತ್ ॥೧೭.೧೬೯॥

ರೇವತಿಯ ತಂದೆಗೆ ಮಗಳ ಪೂರ್ವಜನ್ಮವೃತ್ತಾಂತ ತಿಳಿವ ಬಯಕೆ ,

ತಕ್ಕ ಗಂಡನ ಮೂಲ ತಿಳಿಯಲು ಬ್ರಹ್ಮನಲ್ಲಿಡಬಯಸಿದ ಕೋರಿಕೆ .

 

ಸ ತತ್ಸದೋ ಗತೋ ವರಾತ್ ತದೀಯತಃ ಪ್ರಗೀತಿಕಾಮ್ ।

ನಿಶಮ್ಯ ನಾವಿದದ್ ಗತಂ ಯುಗೋರುಕಾಲಪರ್ಯ್ಯಯಮ್ ॥೧೭.೧೭೦॥

ವರಬಲವಿದ್ದ ಆತ ಸದೇಹನಾಗಿ ಸತ್ಯಲೋಕಕ್ಕೆ ಹೋದ ,

ಮೈಮರೆಸಿತ್ತವನ ಸತ್ಯಲೋಕದ ಗಂಧರ್ವಗಾನ ನಾದ ,

ಮಧುರಗಾನದ ಗುಂಗಲ್ಲಿ ಯುಗಗಳು ಜಾರಿದ್ದು ತಿಳಿಯದಾದ.

ನರಾನಯೋಗ್ಯಗೀತಿಕಾ ವಿಮೋಹಯೇತ್ ತತೋ ನೃಪಃ ।

ಸುಮೂಢಬುದ್ಧಿರನ್ತತೋsಲ್ಪಕಾಲ ಇತ್ಯಮನ್ಯತ ॥೧೭.೧೭೧॥

ಮನುಷ್ಯರಿಗೆ ಅವರ ಯೋಗ್ಯತೆ ಮೀರಿದ ವಿಷಯಗಳಿಂದ ಆವರಿಸುವ ಮೋಹ ,

ಬ್ರಹ್ಮಸಭೆಗಾನದಿಂದ ರಾಜಗೆ ಸ್ವಲ್ಪ ಕಾಲವಾಗಿದೆ ಅಷ್ಟೇ ಎಂಬ ಭ್ರಮೆಯ ಭಾವ .

 

ಸ ಮೂರ್ಚ್ಛಿತಃ ಪ್ರಬೋಧಿತೋsಬ್ಜಜೇನ ತಂ ತ್ವಪೃಚ್ಛತ ।

ಸುತಾಪತಿಂ ಬಲಂ ಚ ಸೋsಬ್ರವೀದ್ ಯುಗಾತ್ಯಯೇ ಬಹೌ ॥೧೭.೧೭೨॥

ಹೀಗೇ ಯುಗ ಯುಗಗಳೇ ಉರುಳಿಹೋದ ವ್ಯಾಪಾರ ,

ಬ್ರಹ್ಮದೇವನೇ ಅವನನ್ನೆಬ್ಬಿಸಿ ಮೂಡಿಸಿದನು ಎಚ್ಚರ .

ರಾಜ ಬ್ರಹ್ಮಗೇ ಕೇಳಿದ -ನನ್ನ ಮಗಳ ಗಂಡನಾರು ?

ರೇವತಿಗೆ ಗಂಡ ಬಲರಾಮನೆಂದರು ಬ್ರಹ್ಮದೇವರು .

 

ಸ ರೈವತೋ ಬಲಾಯ ತಾಂ ಪ್ರದಾಯ ಗನ್ಧಮಾದನಮ್ ।

ಗತೋsತ್ರ ಚೀರ್ಣ್ಣಸತ್ತಪಾ ಅವಾಪ ಕೇಶವಾನ್ತಿಕಮ್ ॥೧೭.೧೭೩॥

ರೈವತರಾಜ ಬಲರಾಮನಿಗೆ ಮಗಳು ರೇವತಿಯನ್ನಿತ್ತ ,

ಗಂಧಮಾದನಪರ್ವತದಲ್ಲಿ ತಾನಾದ ತಪೋನಿರತ ,

ಕಾಲಾನಂತರದಲ್ಲಿ ಶ್ರೀಹರಿಯ ಸನ್ನಿಧಿ ಸೇರಿದನಾತ  .

 

ಬಲೋsಪಿ ತಾಂ ಪುರಾತನಪ್ರಮಾಣಸಮ್ಮಿತಾಂ ವಿಭುಃ ।

ಹಲೇನ ಚಾSಜ್ಞಯಾ ಸಮಾಂ ಚಕಾರ ಸತ್ಯವಾಞ್ಛಿತಃ ॥೧೭.೧೭೪॥

ಸತ್ಯಕಾಮ ಬಲು ಸಮರ್ಥನಾದವನವ ಬಲರಾಮ ,

ರೇವತಿ ಎತ್ತರವಾಗಿದ್ದದ್ದು ಪೂರ್ವಯುಗದ ನೇಮ ,

ತನ್ನ ನೇಗಿಲಿನಿಂದ ಜಗ್ಗಿ ಮಾಡಿಕೊಂಡ ತನ್ನ ಸಮ .

 

ತಯಾ ರತಃ ಸುತಾವುಭೌ ಶಠೋಲ್ಮುಕಾಭಿಧಾವಧಾತ್ ।

ಪುರಾSರ್ಯಮಾಂಶಕೌ ಸುರಾವುದಾರಚೇಷ್ಟಿತೋ ಬಲಃ ॥೧೭.೧೭೫॥

ಈ ತೆರನಾದ ಬಲರಾಮ ರೇವತಿಯರ ಸಂತಸದ ದಾಂಪತ್ಯದಲ್ಲಿ ,

ಆರ್ಯಮ ಅಂಶಕ ದೇವತೆಗಳು ಶಠ ಉಲ್ಮುಕರಾಗಿ ಹುಟ್ಟಿದರಲ್ಲಿ .

No comments:

Post a Comment

ಗೋ-ಕುಲ Go-Kula