Tuesday 25 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 30 - 40

ಯದಾ ತೇ ಸರ್ವಶಸ್ತ್ರಾಸ್ತ್ರವೇದಿನೋ ರಾಜಪುತ್ರಕಾಃ ।

ಬಭೂವು ರಙ್ಗಮದ್ಧ್ಯೇ ತಾನ್ ಭಾರದ್ವಾಜೋsಪ್ಯದರ್ಶಯತ್ ॥೧೮.೩೦॥

ಯಾವಾಗ ಧರ್ಮರಾಜಾದಿ ರಾಜಪುತ್ರರ ಶಸ್ತ್ರವಿದ್ಯೆ ಆಯಿತೋ ಸಂಪೂರ್ಣ ,

ದ್ರೋಣರು ಏರ್ಪಡಿಸಿದರಾಗ ಅದನ್ನು ತೋರಿಸಲು ಒಂದು ರಂಗಪ್ರದರ್ಶನ .

 

ರಕ್ತಚನ್ದನಸತ್ಪುಷ್ಪವಸ್ತ್ರಶಸ್ತ್ರಗುಳೋದನೈಃ ।

ಸಮ್ಪೂಜ್ಯ ಭಾರ್ಗ್ಗವಂ ರಾಮಮನುಜಜ್ಞೇ ಕುಮಾರಕಾನ್ ॥೧೮.೩೧॥

ಕೆಂಪುಗಂಧ ಒಳ್ಳೇ ಹೂಗಳು ವಸ್ತ್ರ ಆಯುಧ ಪಾಯಸಗಳಿಂದ ,

ಪರಶುರಾಮರ ಪೂಜಾಕಾರ್ಯವಾಯಿತು ದ್ರೋಣಾಚಾರ್ಯರಿಂದ ,

ಪ್ರದರ್ಶನಕೆ ಅವಕಾಶವಿತ್ತರು ಕುಮಾರರಿಗೆ ತಮ್ಮ ಆಜ್ಞೆಯಿಂದ .

 

ತೇ ಭೀಷ್ಮದ್ರೋಣವಿದುರಗಾನ್ಧಾರೀಧೃತರಾಷ್ಟ್ರಕಾನ್ ।

ಸರಾಜಮಣ್ಡಲಾನ್  ನತ್ವಾ ಕುನ್ತೀಂ ಚಾದರ್ಶಯಞ್ಛ್ರಮಮ್ ॥೧೮.೩೨॥

ರಾಜಕುವರರು -ಧೃತರಾಷ್ಟ್ರ ಗಾಂಧಾರಿ ವಿದುರ ಭೀಷ್ಮ ದ್ರೋಣ ,

ರಾಜಸಮೂಹ ಕುಂತಿದೇವಿ ಎಲ್ಲಾ ಹಿರಿಯರಿಗೂ ಸಲ್ಲಿಸಿ ನಮನ ,

ನಂತರ ಆರಂಭಿಸಿದರು ತಮ್ಮ ವಿದ್ಯಾಪ್ರಾವೀಣ್ಯತೆಯ ಪ್ರದರ್ಶನ .

 

ಸರ್ವೈಃ ಪ್ರದರ್ಶಿತೇsಸ್ತ್ರೇ ತು ದ್ರೋಣಾದಾತ್ತಮಹಾಸ್ತ್ರವಿತ್ ।

ದ್ರೌಣಿರಸ್ತ್ರಾಣ್ಯಮೇಯಾನಿ ದರ್ಶಯಾಮಾಸ ಚಾಧಿಕಮ್ ॥೧೮.೩೩॥

ಎಲ್ಲರಿಂದ ನಡೆದಿರಲು ತಮ್ಮ ತಮ್ಮ ಅಸ್ತ್ರವಿದ್ಯಾ ಪ್ರದರ್ಶನ ಕಾರ್ಯ ,

ದ್ರೋಣರಲ್ಲಿ ಕಲಿತ ಮಹಾಸ್ತ್ರ ಅಧಿಕವಿದ್ಯೆ ತೋರಿದ ಅಶ್ವತ್ಥಾಮಾಚಾರ್ಯ .

 

ತತೋsಪ್ಯತಿತರಾಂ ಪಾರ್ತ್ಥೋ ದಿವ್ಯಾಸ್ತ್ರಾಣಿ ವ್ಯದರ್ಶಯತ್ ।

ಅವಿದ್ಧ್ಯನ್ಮಾಶಕೇ ಪಾದೇ ಪಕ್ಷಿಣಃ ಪಕ್ಷ್ಮ ಏವ ಚ ॥೧೮.೩೪॥

ಅಶ್ವತ್ಥಾಮನಿಗಿಂತಲೂ ಮಿಗಿಲಾಗಿತ್ತು ಅರ್ಜುನನಾಟ ,

ನೊಣವೊಂದರ ಕಾಲಿಗೆ ಅವನು ಬಾಣವನ್ನು ಬಿಟ್ಟ

ಪಕ್ಷಿವೊಂದರ ಹುಬ್ಬಿನಲ್ಲೂ ಬಾಣವನ್ನು ಅವ ನೆಟ್ಟ .

 

ಏವಮಾದೀನಿ ಚಿತ್ರಾಣಿ ಬಹೂನ್ಯೇಷ ವ್ಯದರ್ಶಯತ್  ।

ತದೈವ ಕರ್ಣ್ಣ ಆಗತ್ಯ ರಾಮೋಪಾತ್ತಾಸ್ತ್ರಸಮ್ಪದಮ್ ॥೧೮.೩೫॥

ದರ್ಶಯನ್ನಧಿಕಃ ಪಾರ್ತ್ಥಾದಭೂದ್ ರಾಜನ್ಯಸಂಸದೀ  ।

ಕುನ್ತೀ ನಿಜಂ ಸುತಂ ಜ್ಞಾತ್ವಾ ಲಜ್ಜಯಾ ನಾವದಚ್ಚ ತಮ್ ॥೧೮.೩೬॥

ಹೀಗೆ ನಡೆದಿರಲು ಅರ್ಜುನನ ಕೌಶಲಗಳ ಪ್ರದರ್ಶನ ,

ಆಯಿತಲ್ಲಿಗೆ ಭಾರ್ಗವಶಿಷ್ಯನಾದ ಕರ್ಣನ ಆಗಮನ ,

ಅಸ್ತ್ರಸಂಪತ್ತೆಲ್ಲಾ ತೋರುತ್ತಾ ಮಿಗಿಲಾಗಿ ಕಂಡ ಕರ್ಣ .

ಕುಂತಿ ಕರ್ಣನ ತನ್ನ ಮಗನೆಂದು ತಿಳಿದು ಪಟ್ಟಳು ನಾಚಿಕೆ,

ಏನನ್ನೂ ವ್ಯಕ್ತಪಡಿಸಲಾಗದ ಪರಿಸ್ಥಿತಿಯಲ್ಲಿ ಇದ್ದಳು ಆಕೆ.

 

ಪಾರ್ತ್ಥೋsಸಹಂಸ್ತಂ ಯುದ್ಧಾಯೈವಾsಹ್ವಯಾಮಾಸ ಸಂಸದಿ ।

ರಣಾಯಾಕ್ಷತ್ರಿಯಾಹ್ವಾನಂ ಜಾನನ್ ಧರ್ಮ್ಮಪ್ರತೀಪಕಮ್ ॥೧೮.೩೭॥

ಇದರಿಂದ ಅರ್ಜುನಗಾಗಲಿಲ್ಲ ಸಹನೆ ,

ನೀಡಿದನವನಿಗೆ ಯುದ್ಧಾಹ್ವಾನವನ್ನೇ ,

ಕ್ಷತ್ರಿಯರಲ್ಲದವರಿಗೆ ನೀಡುವಂತಿಲ್ಲ ಯುದ್ಧಕ್ಕೆ ಆಹ್ವಾನ ,

ಅದನ್ನೇ ಹೇಳುತ್ತಾ ಅರ್ಜುನನ ತಡೆದನಲ್ಲಿ ಭೀಮಸೇನ .

 

ಭೀಮೋ ನಿವಾರ್ಯ್ಯ ಬೀಭತ್ಸುಂ ಕರ್ಣ್ಣಾಯಾದಾತ್ ಪ್ರತೋದಕಮ್ ।

ಅಕ್ಷತ್ರಸಂಸ್ಕಾರಯುತೋ ಜಾತೋsಪಿ ಕ್ಷತ್ರಿಯೇ ಕುಲೇ ॥೧೮.೩೮॥

ನ ಕ್ಷತ್ರಿಯೋ ಹಿ ಭವತಿ ಯಥಾ ವ್ರಾತ್ಯೋ ದ್ವಿಜೋತ್ತಮಃ ।

ನಿರುತ್ತರೇ ಕೃತೇ ಕರ್ಣ್ಣೇ ಭೀಮೇನೈವ ಸುಯೋಧನಃ ॥೧೮.೩೯॥

ಅಭ್ಯಷೇಚಯದಙ್ಗೇಷು ರಾಜಾನಂ ಪಿತ್ರನುಜ್ಞಯಾ ।

ಧೃತರಾಷ್ಟ್ರಃ ಪಕ್ಷಪಾತಾತ್ ಪುತ್ರಸ್ಯಾನು ವಶೋsಭವತ್ ॥೧೮.೪೦॥

ಕರ್ಣನ ಯುದ್ಧಕೆ ಕರೆದ ಅರ್ಜುನನ ತಡೆದ ಭೀಮಸೇನ ,

ಕರ್ಣಗೆ ಮಾಡಿದ ಕುದುರೆ ಹೊಡೆಯುವ ಚಾಟಿ ಪ್ರದಾನ.

ಕ್ಷತ್ರಿಯನಾಗಿ ಹುಟ್ಟಿದರೂ ಆಗಲ್ಲ ಕ್ಷತ್ರಿಯ ಆಗದಿದ್ದರೆ ಕ್ಷತ್ರಿಯ ಸಂಸ್ಕಾರ ,

ಹೇಗೆ ವಿಪ್ರಕುಲದಲಿ ಹುಟ್ಟಿದವನೂ ಸಂಸ್ಕಾರವಾಗದಿರೆ ಬ್ರಾಹ್ಮಣನಾಗಲಾರ.

ಹೀಗೆ ಭೀಮಸೇನ ಕರ್ಣನ ಸಿಕ್ಕಿಸಿ ಉತ್ತರಹೀನನನ್ನಾಗಿ ಮಾಡಿದ ,

ದುರ್ಯೋಧನ ಅಪ್ಪನೊಪ್ಪಿಗೆ ಪಡೆದು ಕರ್ಣನ ಅಂಗರಾಜನ ಮಾಡಿದ .

ಪುತ್ರವಶನಾಗಿ ತನ್ನತನ ಕಳಕೊಂಡ ಧೃತರಾಷ್ಟ್ರ ಏನೂಮಾಡದೆ ಒಪ್ಪಿದ .

[Contributed by Shri Govind Magal] 

No comments:

Post a Comment

ಗೋ-ಕುಲ Go-Kula