ಶಿನಿಪ್ರವೀರೇ ತು ಗತೇ
ಯುಧಿಷ್ಠಿರಃ ಪುನಶ್ಚ ಚಿನ್ತಾಕುಲಿತೋ ಬಭೂವ ಹ ।
ಜಗಾದ ಭೀಮಂ ಚ ನ
ಗಾಣ್ಡಿವಧ್ವನಿಃ ಸಂ ಶ್ರೂಯತೇ ಪಾಞ್ಚಜನ್ಯಸ್ಯ ರಾವಃ ॥ ೨೬.೧೧೨ ॥
ಅತ್ತ ಸಾತ್ಯಕಿ ತೆರಳಿದ
ಮೇಲೆ ಯುಧಿಷ್ಠಿರನು ಮತ್ತೆ ಚಿಂತಾಕ್ರಾಂತನಾದ,
ಗಾಂಡೀವದ ಧ್ವನಿ
ಕೇಳುತ್ತಿಲ್ಲ, ಕೇವಲ ಪಾಂಚಜನ್ಯದ
ಧ್ವನಿ ಕೇಳಿಸುತ್ತಿದೆ ಭೀಮ ಎಂದ.
ಮಯಾ ನಿಯುಕ್ತಶ್ಚ ಗತಃ
ಸ ಸಾತ್ಯಕಿರ್ಭಾರಂ ಚ ತಸ್ಯಾಧಿಕಮೇವ ಮನ್ಯೇ ।
ತತ್ ಪಾಹಿ ಪಾರ್ತ್ಥಂ
ಯುಯುಧಾನಮೇವ ಚ ತ್ವಂ ಭೀಮ ಗತ್ವಾ ಯದಿ ಜೀವತಸ್ತೌ ॥ ೨೬.೧೧೩ ॥
‘ನನ್ನಿಂದ ನಿಯೋಜಿಸಲ್ಪಟ್ಟ
ಸಾತ್ಯಕಿಯು ಇಲ್ಲಿಂದ ಹೋಗಿದ್ದಾನೆ,
ಅವನಿಗೆ ಹೆಚ್ಚಿನ ಭಾರ
ಹಾಕಿದೆನೋ ಏನೋ ಎಂದು ನನ್ನ ಭಾವನೆ.
ಆದ ಕಾರಣ ಭೀಮ ನೀನು
ಹೋಗಿ ನೋಡು, ಅರ್ಜುನ-ಸಾತ್ಯಕಿ
ಬದುಕಿದ್ದರೆ ಅವರ ಕಾಪಾಡು.
ಇತೀರಿತಃ ಪ್ರಾಹ
ವೃಕೋದರಸ್ತಂ ನ ರಕ್ಷಿತಂ ವಾಸುದೇವೇನ ಪಾರ್ತ್ಥಮ್ ।
ಬ್ರಹ್ಮೇಶಾನಾವಪಿ
ಜೇತುಂ ಸಮರ್ತ್ಥೌ ಕಿಂ ದ್ರೌಣಿಕರ್ಣ್ಣಾದಿಧನುರ್ಭೃತೋSತ್ರ ॥ ೨೬.೧೧೪ ॥
ಈರೀತಿಯಾಗಿ ಯುಧಿಷ್ಠಿರ
ಹೇಳಲು ಭೀಮನೆಂದ,
ಅರ್ಜುನ
ರಕ್ಷಿತನಾಗಿದ್ದಾನೆ ಆ ವಾಸುದೇವನಿಂದ.
ಬ್ರಹ್ಮ-ರುದ್ರಾದಿಗಳೂ
ಕೂಡಾ ಅವನ ಗೆಲ್ಲಲು ಸಮರ್ಥರಲ್ಲ.
ಇನ್ನು ಅಶ್ವತ್ಥಾಮ, ಕರ್ಣಾದಿಗಳಿಂದ ಭಯವಿಲ್ಲ ಎಂದ್ಹೇಳಬೇಕಿಲ್ಲ.
ಅತೋ ಭಯಂ ನಾಸ್ತಿ
ಧನಞ್ಚಯಸ್ಯ ನ ಸಾತ್ಯಕೇಶ್ಚೈವ ಹರೇಃ ಪ್ರಸಾದಾತ್ ।
ರಕ್ಷ್ಯಸ್ತ್ವಮೇವಾತ್ರ
ಮತೋ ಮಮಾದ್ಯ ದ್ರೋಣೋ ಹ್ಯಯಂ ಯತತೇ ತ್ವಾಂ ಗೃಹೀತುಮ್ ॥ ೨೬.೧೧೫ ॥
ದೈವಾನುಗ್ರಹದಿಂದ
ಅರ್ಜುನನಿಗಾಗಲೀ, ಸಾತ್ಯಕಿಗಾಗಲೀ
ಭಯವಿಲ್ಲ,
ಆದರೆ ಇಲ್ಲಿ ದ್ರೋಣ ಹಾಕಿದ್ದಾನೆ ನಿನ್ನನ್ನು ಹಿಡಿಯಬೇಕೆನ್ನುವ
ಜಾಲ.
ಹೀಗಾಗಿಯೇ ಈಗ ನಾನು
ಇಲ್ಲಿದ್ದು ನಿನ್ನನ್ನು ರಕ್ಷಣೆ ಮಾಡುವ ಕಾಲ.
ಇತೀರಿತಃ ಪ್ರಾಹ
ಯುಧಿಷ್ಠಿರಸ್ತಂ ನ ಜೀವಮಾನೇ ಯುಧಿ ಮಾಂ ಘಟೋತ್ಕಚೇ ।
ಧೃಷ್ಟದ್ಯುಮ್ನೇ
ಚಾಸ್ತ್ರವಿದಾಂ ವರಿಷ್ಠೇ ದ್ರೋಣೋ ವಶಂ ನೇತುಮಿಹ ಪ್ರಭುಃ ಕ್ವಚಿತ್ ॥ ೨೬.೧೧೬ ॥
ಭೀಮಸೇನನನ್ನು ಕುರಿತು
ಹೇಳುತ್ತಾನೆ-ಇದನ್ನೆಲ್ಲಾ ಕೇಳಿಸಿಕೊಂಡ ಯುಧಿಷ್ಠಿರ,
ಘಟೋತ್ಕಚ, ಅಸ್ತ್ರಶ್ರೇಷ್ಠ ಧೃಷ್ಟದ್ಯುಮ್ನರಿದ್ದಾಗ ದ್ರೋಣ
ನನ್ನನ್ನು ಹಿಡಿಯಲಾರ.
ಯದಿ ಪ್ರಿಯಂ
ಕರ್ತ್ತುಮಿಹೇಚ್ಛಸಿ ತ್ವಂ ಮಮ ಪ್ರಯಾಹ್ಯಾಶು ಚ ಪಾರ್ತ್ಥಸಾತ್ಯಕೀ ।
ರಕ್ಷಸ್ವ ಸಙ್ಜ್ಞಾಮಪಿ
ಸಿಂಹನಾದಾತ್ ಕುರುಷ್ವ ಮೇ ಪಾರ್ತ್ಥಶೈನೇಯದೃಷ್ಟೌ ॥ ೨೬.೧೧೭ ॥
ನನಗೆ ಇಷ್ಟ
ಪೂರೈಸಬೇಕೆಂದಿದ್ದರೆ ನಿನ್ನ ಯೋಚನೆ,
ಶೀಘ್ರದಲ್ಲಿ ಮಾಡು ಅರ್ಜುನ-ಸಾತ್ಯಕಿಯರ
ರಕ್ಷಣೆ,
ನೀಡು ಅವರನ್ನು ಕಂಡ
ಮೇಲೆ ಸಿಂಹನಾದದ ಸೂಚನೆ.
ತಥಾ ಹತೇ ಚೈವ ಜಯದ್ರಥೇ
ಮೇ ಕುರುಷ್ವ ಸಙ್ಜ್ಞಾಮಿತಿ ತೇನ ಭೀಮಃ ।
ಉಕ್ತಸ್ತು
ಹೈಡಿಮ್ಬಮಮುಷ್ಯ ರಕ್ಷಣೇ ವ್ಯಧಾಚ್ಚ ಸೇನಾಪತಿಮೇವ ಸಮ್ಯಕ್ ॥ ೨೬.೧೧೮ ॥
ಹಾಗೆಯೇ ಜಯದ್ರಥ
ಹತನಾದಾಗಲೂ ನನಗೆ ಸೂಚನೆಯನ್ನು ಮಾಡು ಎಂದು ಹೇಳಿದ.
ಆಗ ಭೀಮ ಯುಧಿಷ್ಠಿರನ
ರಕ್ಷಣೆಗಾಗಿ ಘಟೋತ್ಕಚ - ಧೃಷ್ಟದ್ಯುಮ್ನರ ನೇಮಿಸಿದ.
ಸ ಚಾSಹ ಸೇನಾಪತಿರತ್ರ ಭೀಮಂ ಪ್ರಯಾಹಿ ತೌ ಯತ್ರ ಚ
ಕೇಶವಾರ್ಜ್ಜುನೌ ।
ನ ಜೀವಮಾನೇ ಮಯಿ
ಧರ್ಷಿತುಂ ಕ್ಷಮೋ ದ್ರೋಣೋ ನೃಪಂ ಮೃತ್ಯುರಹಂ ಚ ತಸ್ಯ ॥ ೨೬.೧೧೯ ॥
ಆಗ ಸೇನಾಧಿಪತಿಯಾದ
ಧೃಷ್ಟದ್ಯುಮ್ನ ಭೀಮಗೆ, ಹೋಗಲು ಹೇಳುವ
ಕೃಷ್ಣಾರ್ಜುನರಿರುವಲ್ಲಿಗೆ. ನಾನು ಬದುಕಿರಬೇಕಾದರೆ ಆ ದ್ರೋಣ, ಅವನಿಗಿಲ್ಲ ಧರ್ಮಜನ ಹಿಡಿಯುವ ತ್ರಾಣ,
ನಾನೇ ಆಗಿದ್ದೇನೆ
ದ್ರೋಣನ ಪಾಲಿನ ಮರಣ.
ಇತಿ ಬ್ರುವಾಣೇ
ಪ್ರಣಿಧಾಯ ಭೀಮಃ ಪುನಃ ಪುನಸ್ತಂ ನೃಪತಿಂ ಗದಾಧರಃ ।
ಯಯೌ
ಪರಾನೀಕಮಧಿಜ್ಯಧನ್ವಾ ನಿರನ್ತರಂ ಪ್ರವಪನ್ ಬಾಣಪೂಗಾನ್ ॥ ೨೬.೧೨೦ ॥
ಈರೀತಿಯಾಗಿ ಅವರಿಂದ
ಪುನಃ ಹೇಳಲ್ಪಟ್ಟ ಭೀಮಸೇನ,
ಧರ್ಮರಾಜನ ರಕ್ಷಣೆಗೆ
ಸ್ಥಾಪಿಸುತ್ತಾನೆ ಧೃಷ್ಟದ್ಯುಮ್ನನನ್ನ.
ಗದೆ ಹಿಡಿದು, ಬಿಲ್ಲಿನಿಂದ ಶತ್ರುಸೈನ್ಯದ ಮೇಲೆ,
ಸುರಿಸುತ್ತ ಸಾಗಿದ
ಬಾಣಗಳ ನಿರಂತರ ಮಳೆ.
ನ್ಯವಾರಯತ್ ತಂ
ಶರವರ್ಷಧಾರೋ ದ್ರೋಣೋ ವಚಶ್ಚೇದಮುವಾಚ ಭೀಮಮ್ ।
ಶಿಷ್ಯಸ್ನೇಹಾದ್
ವಾಸವಿಃ ಸಾತ್ಯಕಿಶ್ಚ ಮಯಾ ಪ್ರಮುಕ್ತೌ ಭೃಶಮಾನತೌ ಮಯಿ ॥ ೨೬.೧೨೧ ॥
ಹೀಗೆ
ಮುನ್ನುಗ್ಗುತ್ತಿದ್ದ ಭೀಮಸೇನನಿಗೆ ಬಾಣಗಳ ಮಳೆಗರೆಯುತ್ತಿರುವ ದ್ರೋಣಾಚಾರ್ಯ,
ತಡೆದು ಹೇಳಿದ-ಅರ್ಜುನ
ಸಾತ್ಯಕಿಯರನ್ನು ಬಿಟ್ಟು ಉಳಿಸಿದೆ ‘ಶಿಷ್ಯ ಪ್ರೀತಿಯ ಔದಾರ್ಯ'.
ಸ್ವೀಯಾ ಪ್ರತಿಜ್ಞಾSಪಿ ಹಿ ಸೈನ್ಧವಸ್ಯ ಗುಪ್ತೌ ಮಯಾ ಪಾರ್ತ್ಥಕೃತೇ
ವಿಸೃಷ್ಟಾ
ದಾಸ್ಯೇ ನ ತೇ ಮಾರ್ಗ್ಗಮಹಂ
ಕಥಞ್ಚಿದ್ ಪಶ್ಯಾಸ್ತ್ರವೀರ್ಯಂ ಮಮ ದಿವ್ಯಮದ್ಭುತಮ್ ॥ ೨೬.೧೨೨ ॥
ಜಯದ್ರಥನ ರಕ್ಷಣೆಗಾಗಿ
ನಾನು ಮಾಡಿದ ಪ್ರತಿಜ್ಞೆ, ಅದನ್ನು ಕೂಡಾ
ಅರ್ಜುನನಿಗೋಸ್ಕರ ಬಿಟ್ಟಿದ್ದೇನೆ. ಆದರೆ ನಿನಗೆ ಮಾತ್ರ ಯಾವುದೇ ಕಾರಣಕ್ಕೂ ನಾನು ದಾರಿ
ಕೊಡುವುದಿಲ್ಲ,
ನೋಡು ನನ್ನ ಅಲೌಕಿಕವಾದ
ಅದ್ಭುತವಾದ ಅಸ್ತ್ರ ಸಾಮರ್ಥ್ಯದ ಬಲ.
ಇತ್ಯುಕ್ತವಾಕ್ಯಃ ಸ ಗದಾಂ ಸಮಾದದೇ ಚಿಕ್ಷೇಪ ತಾಂ ದ್ರೋಣರಥಾಯ ಭೀಮಃ ।
ಉವಾಚ ಚಾಹಂ
ಪಿತೃವನ್ಮಾನಯೇ ತ್ವಾಂ ಸದಾ ಮೃದುಸ್ತ್ವಾಂ ಪ್ರತಿ ನಾನ್ಯಥಾ ಕ್ವಚಿತ್ ॥ ೨೬.೧೨೩ ॥
ಈರೀತಿ ದ್ರೋಣರು ಹೇಳಲು
ಭೀಮ ತನ್ನ ಗದೆಯನ್ನು ದ್ರೋಣರಥದತ್ತ ಎಸೆದ,
ನೀನು ನನ್ನ ತಂದೆ ಸಮಾನ
ಗೌರವಪಾತ್ರ ಹಾಗಾಗಿಯೇ ನನ್ನ ಮೃದುತ್ವ ಎಂದ.
ಪ್ರೀತಿ ಗೌರವ
ಮೃದುತ್ವದ ಹೂರಣ, ಅದನ್ನ ಬಿಟ್ಟು
ಮತ್ತೇನಿಲ್ಲ ಕಾರಣ.
ಅಮಾರ್ದ್ದವೇ ಪಶ್ಯ ಚ
ಯಾದೃಶಂ ಬಲಂ ಮಮೇತಿ ತಸ್ಯಾSಶು
ವಿಚೂರ್ಣ್ಣಿತೋ ರಥಃ ।
ಗದಾಭಿಪಾತೇನ
ವೃಕೋದರಸ್ಯ ಸಸೂತವಾಜಿಧ್ವಜಯನ್ತ್ರಕೂಬರಃ ॥ ೨೬.೧೨೪ ॥
‘ನಾನು ಸಿಡಿದರೆ ನನ್ನ
ಬಲ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀನು
ನೋಡು’ ಎಂದ ಭೀಮ ತನ್ನ ಗದೆಯನ್ನು ಎಸೆದ,
ಸೂತ, ಕುದುರೆ, ಧ್ವಜ, ನೊಗ, ಎಲ್ಲದರೊಂದಿಗೆ ದ್ರೋಣಾಚಾರ್ಯರ ರಥ
ಪುಡಿ-ಪುಡಿಯಾಯಿತು ಭೀಮಗದಾಪ್ರಹಾರದಿಂದ.
ದ್ರೋಣೋ ಗದಾಮಾಪತತೀಂ
ನಿರೀಕ್ಷ್ಯ ತ್ವವಪ್ಲುತೋ ಲಾಘವತೋ ಧರಾತಳೇ ।
ತದೈವ
ದುರ್ಯ್ಯೋಧನಯಾಪಿತಂ ರಥಂ ಪರಂ ಸಮಾಸ್ಥಾಯ ಶರಾನ್ ವವರ್ಷ ಹ ॥ ೨೬.೧೨೫ ॥
ಬರುತ್ತಿದ್ದ ಗದೆಯ
ನೋಡಿದ ದ್ರೋಣರು , ವೇಗವಾಗಿ ಭೂಮಿಗೆ
ಹಾರಿಕೊಂಡರು.
ಕೌರವ ಕಳಿಸಿದ
ಇನ್ನೊಂದು ರಥವೇರಿದರು, ಏರಿದ ಮೇಲೆ ಮತ್ತೆ
ಬಾಣಗಳ ಮಳೆಗೈದರು.
ಶರೈಸ್ತದೀಯೈಃ
ಪರಮಾಸ್ತ್ರಮನ್ತ್ರಿತೈಃ ಪ್ರವೃಷ್ಯಮಾಣೋ ಜಗದೀರಣಾತ್ಮಜಃ ।
ಶಿರೋ ನಿಧಾಯಾSಶು ಪುರೋ ವೃಷೋ ಯಥಾ ತಮಭ್ಯಯಾದೇವ ರಥಾದವಪ್ಲುತಃ
॥ ೨೬.೧೨೬ ॥
ಅತ್ಯಂತ
ಮಂತ್ರಪೂತವಾಗಿರುವ ಆ ಬಾಣಗಳ ಎದುರುಗೊಂಡ,
ಮುಖ್ಯಪ್ರಾಣಪುತ್ರ ಭೀಮ, ಗೂಳಿಯಂತೆ ತಲೆ ಮುಂದೆ ಮಾಡಿಕೊಂಡ.
ರಥದಿಂದಿಳಿದವನೇ
ಗೂಳಿಯಂತೆ ದ್ರೋಣರತ್ತ ವೇಗವಾಗಿ ನುಗ್ಗಿಬಂದ.
ಯಾವರೀತಿ
ಮುನ್ನುಗ್ಗುತ್ತಿರುವ ಗೂಳಿ,
ಜೋರಾಗಿ ಸುರಿವ
ಮಳೆಯನ್ನು ತಾಳಿ, ತಡೆದುಕೊಳ್ಳುವಂತೆ
ವಾಯುಪುತ್ರ;
ತನ್ನ ತೋಳ ಮುಂದೆ ಮಾಡಿ, ತಲೆ ಬಗ್ಗಿಸಿ ಮುನ್ನುಗ್ಗುತ್ತಿದ್ದ ನರವ್ಯಾಘ್ರ
ಭೀಮ ಮಾಡಿದ ದ್ರೋಣರ ಶರಮಳೆಯ ಸ್ವೀಕಾರ.
ಮನೋಜವಾದೇವ ತಮಾಪ್ಯ
ಭೀಮೋ ರಥಂ ಗೃಹೀತ್ವಾSಮ್ಬರ ಅಕ್ಷಿಪತ್
ಕ್ಷಣಾತ್ ।
ಶಕ್ತೋSಪ್ಯಹಂ ತ್ವಾಂ ನ ನಿಹನ್ಮಿ ಗೌರವಾದಿತ್ಯೇವ
ಸುಜ್ಞಾಪಯಿತುಂ ತದಸ್ಯ ॥ ೨೬.೧೨೭ ॥
‘ನನಗೆ ಶಕ್ತಿ ಇದ್ದರೂ
ಕೂಡಾ ನಿಮ್ಮ ಮೇಲಿನ ಗೌರವ ಭಾವನೆಯಿಂದ ನಿಮ್ಮನ್ನು ಕೊಲ್ಲುವುದಿಲ್ಲ’ ಎಂದು ದ್ರೋಣರಿಗೆ ತನ್ನ
ಬಲವ ತೋರುವುದಕ್ಕೆ; ಭೀಮಸೇನನು ಮನಸ್ಸಿಗೆ
ಮೀರಿದ ವೇಗದಿಂದ ದ್ರೋಣಾಚಾರ್ಯರ ಬಳಿಗೆ ಸಾಗಿ ಬಂದವನು ಅವರ ರಥವನ್ನು ಹಿಡಿದು ಎಸೆದ
ಆಕಾಶಕ್ಕೆ.
ಸವಾಜಿಸೂತಃ ಸ ರಥಃ
ಕ್ಷಿತೌ ಪತನ್ ವಿಚೂರ್ಣ್ಣಿತೋSಸ್ಮಾದ್
ಗುರುರಪ್ಯವಪ್ಲುತಃ ।
ತದಾ ವಿಶೋಕೋSಸ್ಯ ರಥಂ ಸಮಾನಯತ್ ತಮಾರುಹದ್ ಭೀಮ ಉದಾರವಿಕ್ರಮಃ
॥ ೨೬.೧೨೮ ॥
ಕುದುರೆ, ಸೂತ, ಮೊದಲಾದವರಿಂದ
ಕೂಡಿದ ಆ ರಥ ನೆಲಕ್ಕೆ ಬಿದ್ದು ಪುಡಿ-ಪುಡಿಯಾದಾಗ,
ಆ ರಥದಿಂದ
ಗುರುದ್ರೋಣರೂ ಕೆಳಗೆ ಹಾರಲು ಭೀಮಸಾರಥಿ ವಿಶೋಕನು
ರಥವ ತಂದಾಗ, ಉತ್ಕೃಷ್ಟವಾದಂಥ
ಪರಾಕ್ರಮವುಳ್ಳವನಾದ ಭೀಮಸೇನನು ತನ್ನ ರಥವನ್ನೇರಿಕೊಳ್ಳುವನಾಗ .