Thursday, 26 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 89-95

 

ತಸ್ಮಾತ್ ಕಾರ್ಯ್ಯಂ ತೇನ  ಕ್ಲ್ ಪ್ತಂ ಸ್ವಕರ್ಮ್ಮ ತತ್ ಪೂಜಾರ್ತ್ಥಂ ತೇನ ತತ್ಪ್ರಾಪ್ತಿರೇವ ।

ಅತೋSನ್ಯಥಾ ನಿರಯಃ ಸರ್ವಥಾ ಸ್ಯಾತ್ ಸ್ವಕರ್ಮ್ಮ ವಿಪ್ರಸ್ಯ ಜಪೋಪದೇಶೌ ॥೨೨.೮೯॥

 

ವಿಷ್ಣೋರ್ಮ್ಮುಖಾದ್ ವಿಪ್ರಜಾತಿಃ ಪ್ರವೃತ್ತಾ ಮುಖೋತ್ಥಿತಂ ಕರ್ಮ್ಮ ತೇನಾಸ್ಯ ಸೋSದಾತ್ ।

ಬಾಹ್ವೋರ್ಜ್ಜಾತಃ ಕ್ಷತ್ರಿಯಸ್ತೇನ ಬಾಹ್ವೋಃ ಕರ್ಮ್ಮಾಸ್ಯ ಪಾಪಪ್ರತಿವಾರಣಂ ಹಿ ॥೨೨.೯೦॥

ಭಗವಂತ ಯಾವಾಗಲೂ ಸರ್ವತಂತ್ರ ಸ್ವತಂತ್ರ,

ಜೀವಿಗಳದು ಅವನಧೀನವಾದ ಸೀಮಿತ ಸ್ವಾತಂತ್ರ್ಯ.

ಜೀವಯೋಗ್ಯತೆಯಂತೆ ಸ್ವಕರ್ಮ ಮಾಡುವುದು ಜೀವನ ಧರ್ಮ,

ಯೋಗ್ಯತೆಯಂತೆ ಪ್ರಯತ್ನ ದೇವಪೂಜೆಯಂತಿರಲಿ ಎಂಬ ಮರ್ಮ.

ಹಾಗೆ ಪ್ರಾಮಾಣಿಕವಾಗಿ ಮಾಡುವುದರಿಂದಲೇ ಜೀವಕ್ಕೆ ಬಿಡುಗಡೆ,

ಹಾಗೆ ಪ್ರಯತ್ನ ಮಾಡದಿದ್ದರೆ ಜೀವನ ಯಾನವು ಅದು ನರಕದ ಕಡೆ.

 

ಬ್ರಾಹ್ಮಣನ ಸ್ವಕರ್ಮ ಅಧ್ಯಯನ ಮತ್ತು ಅಧ್ಯಾಪನ,

ಆ ವರ್ಣದ ಜನನವು ವಿಷ್ಣುಮುಖದಿಂದಾದ ಕಾರಣ.

ಹಾಗಾಗಿ ಭಗವಂತ ಬ್ರಾಹ್ಮಣರಿಗೆ ಆ ಕರ್ಮವ ಕೊಟ್ಟ,

ಕ್ಷತ್ರಿಯ ತೋಳಿಂದ ಹುಟ್ಟಿದ್ದರಿಂದ ಪಾಪ ತಡೆಗೆ ಇಟ್ಟ.

 

ಪ್ರವರ್ತ್ತನಂ ಸಾಧುಧರ್ಮ್ಮಸ್ಯ ಚೈವ ಮುಖಸ್ಯ ಬಾಹ್ವೋಶ್ಚಾತಿಸಾಮೀಪ್ಯತೋSಸ್ಯ ।

ಜಪೋಪದೇಶೌ ಕ್ಷತ್ರಿಯಸ್ಯಾಪಿ ವಿಷ್ಣುಶ್ಚಕ್ರೇ ಧರ್ಮ್ಮೌ ಯಜ್ಞಕರ್ಮ್ಮಾಪಿ ವಿಪ್ರೇ ॥೨೨.೯೧॥

ಕ್ಷತ್ರಿಯರ ಕರ್ತವ್ಯವಾಗಿದೆ - ಧರ್ಮದ ಪ್ರವರ್ತನೆ,

ಕ್ಷತ್ರಿಯರೂ ಮಾಡಬೇಕು ಜಪೋಪದೇಶ-ಪಾಲನೆ.

ಮುಖ ಮತ್ತು ತೋಳುಗಳಿವೆ ಒಂದಕ್ಕೊಂದು ಬಲು ಸಮೀಪ,

ಯಜ್ಞ ವಿಪ್ರಗೆ;ಧರ್ಮಾಚರಣೆ ರಕ್ಷಣೆ ಕ್ಷತ್ರಿಯಗೆ ಎಂದವನ ಸಂಕಲ್ಪ.

 

ವೈಶ್ಯೋ ಯಸ್ಮಾದೂರುಜಸ್ತೇನ ತಸ್ಯ ಪ್ರಜಾವೃದ್ಧಿಸ್ತಜ್ಜಕರ್ಮ್ಮೈವ ಧರ್ಮ್ಮಃ ।

ತತ್ಸಾದೃಶ್ಯಾತ್ ಸ್ಥಾವರಾಣಾಂ ಚ ವೃದ್ಧಿಂ ಕರೋರೂರ್ವೋಃ ಸನ್ನಿಕೃಷ್ಟತ್ವಹೇತೋಃ ॥೨೨.೯೨॥

 

ವಾರ್ತ್ತಾತ್ಮಕಂ ಕರ್ಮ್ಮ ಧರ್ಮ್ಮಂ ಚಕಾರ ವಿಷ್ಣುಸ್ತಸ್ಯೈವಾಙ್ಘ್ರಿಜಃ ಶೂದ್ರ ಉಕ್ತಃ ।

ಗತಿಪ್ರಧಾನಂ ಕರ್ಮ್ಮ ಶುಶ್ರೂಷಣಾಖ್ಯಂ ಸಾದೃಶ್ಯತೋ ಹಸ್ತಪದೋಸ್ತಥೈವ ॥೨೨.೯೩॥

 

ಹಸ್ತೋದ್ಭವಂ ಕರ್ಮ್ಮ ತಸ್ಯಾಪಿ ಧರ್ಮ್ಮಃ ಸನ್ತಾನವೃದ್ಧಿಶ್ಚ ಸಮೀಪಗತ್ವಾತ್ । 

ಭುಜಾವುರೋ ಹೃದಯಂ ಯದ್ ಬಲಸ್ಯ ಜ್ಞಾನಸ್ಯ ಚ ಸ್ಥಾನಮತೋ ನೃಪಾಣಾಮ್ ॥೨೨.೯೪॥

 

ಬಲಂ ಜ್ಞಾನಂ ಚೋಭಯಂ ಧರ್ಮ್ಮ ಉಕ್ತಃ ಪಾಣೌ ಕೃತೀನಾಂ ಕೌಶಲಂ ಕೇವಲಂ ಹಿ ।

ತಸ್ಮಾತ್ ಪಾಣ್ಯೋರೂರುಪದೋರುಪಸ್ಥಿತೇರ್ವಿಟ್ಛೂದ್ರಕೌ ಕರ್ಮ್ಮಣಾಂ ಕೌಶಲೇತೌ ॥೨೨.೯೫॥

ವೈಶ್ಯರ ಜನನ ಭಗವಂತನ ತೊಡೆಯಿಂದಾದ ಕಾರಣದಿಂದ,

ಪ್ರಜಾಭಿವೃದ್ಧಿಗೆಂದೇ ತೋಟಗಾರಿಕೆಗೆ ಅವರ ನೇಮಿಸಿದ.

ಕೈಗಳು ಮತ್ತು ತೊಡೆಗಳು ಹತ್ತಿರವಿದ್ದು ತಾಗಿಕೊಂಡಿರುವುದರಿಂದ,

ಜೀವನ ನಿರ್ವಹಣೆಗನುಕೂಲವಾದ ವ್ಯಾಪಾರ ವಹಿವಾಟು ನೇಮಿಸಿದ.

ಶೂದ್ರನ ಜನನ ಭಗವಂತನ ಕಾಲಿನಿಂದ ಎಂದು ಪ್ರತೀತಿ,

ಕೈಯಿಂದಾಗುವ ಸೇವೆ ಸಂತಾನವೃದ್ಧಿ ಅವನದೆಂದು ನೀತಿ.

 

ಬಾಹುಗಳು ತೊಡೆಗಳು ಮತ್ತು ಹೃದಯ,

ಬಲ ಜ್ಞಾನ ಎಲ್ಲದಕ್ಕೂ ಅವುಗಳೇ ಆಶ್ರಯ.

ಕ್ಷತಿಯರಿಗೆ ಭುಜಗಳ ಸ್ಥಾನಮಾನ,

ರಕ್ಷಣಾಕಾರ್ಯವೇ ಅವರ ಜೀವನ.

ಎರಡೂ ತೋಳುಗಳ ಮಧ್ಯವಿದೆ ಹೃದಯ,

ಇದಾಗಿದೆ ಬಲಕ್ಕೂ ಜ್ಞಾನಕ್ಕೂ ತಾನು ಆಶ್ರಯ.

ಬಲ ಮತ್ತು ಜ್ಞಾನ ಕ್ಷತ್ರಿಯರಲ್ಲಿರಬೇಕಾದ ಗುಣ,

ಮುಖ್ಯ ಕ್ಷತಿಯ ಧರ್ಮವಾಗಿದೆ ಬಲ ಮತ್ತು ಜ್ಞಾನ.

ಜಾಣತನದ ಕೆಲಸಗಳು ಕೈಗಳಿಂದ ಆಗುವುದರಿಂದ,

ಕೈ ತೊಡೆ ಕಾಲುಗಳು ಒಂದಕ್ಕೊಂದು ಹತ್ತಿರವಿರುವುದರಿಂದ,

ವೈಶ್ಯ ಶೂದ್ರರಿಗೆ ಹಸ್ತಯೋಗ್ಯವಾದ ಕರ್ಮ,

ದೇವರೇ ಹೆಣೆದ ಸಮಾಜ ನಿರ್ವಹಣಾ ಧರ್ಮ.


 [Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 83-88

 

ಅಜ್ಞಃ ಪ್ರತ್ಯಕ್ಷಂ ತ್ವಪಹಾಯೈವ ದೈವಂ ಮತ್ವಾ ಕರ್ತ್ತೃ ಸ್ವಾತ್ಮಕರ್ಮ್ಮ ಪ್ರಜಹ್ಯಾತ್ ।

ವಿದ್ವಾನ್ ಜೀವಂ ವಿಷ್ಣುವಶಂ ವಿದಿತ್ವಾ ಕರೋತಿ ಕರ್ತ್ತವ್ಯಮಜಸ್ರಮೇವ ॥೨೨.೮೩॥

ಅಜ್ಞಾನಿಯು ಬದಿಗಿಡುತ್ತಾನೆ ತನ್ನ ಅನುಭವ,

ತಿಳಿಯುತ್ತಾನೆ ಕರ್ತೃವದೊಂದೇ ಅದು ದೈವ.

ತ್ಯಜಿಸಿ ಬಿಡುತ್ತಾನೆ ತನ್ನ ಪಾಲಿನ ಕರ್ತವ್ಯ.

ಆದರೆ ಜ್ಞಾನಿಗೆ ವಿಷ್ಣುವಶವದು ಜೀವ,

ನಿರಂತರ ಕರ್ತವ್ಯ ಸಾಗಿಸುತ್ತದೆ ದೈವಭಾವ.

 

ಸ್ವಭಾವಾಖ್ಯಾ ಯೋಗ್ಯತಾ ಯಾ ಹಠಾಖ್ಯಾ ಯಾSನಾದಿಸಿದ್ಧಾ ಸರ್ವಜೀವೇಷು ನಿತ್ಯಾ ।

ಸಾ ಕಾರಣಂ ತತ್ ಪ್ರಥಮಂ ತು ದ್ವಿತೀಯಮನಾದಿ ಕರ್ಮ್ಮೈವ ತಥಾ ತೃತೀಯಃ ॥೨೨.೮೪॥

 

ಜೀವಪ್ರಯತ್ನಃ ಪೌರುಷಾಖ್ಯಸ್ತದೇತತ್ ತ್ರಯಂ ವಿಷ್ಣೋರ್ವಶಗಂ ಸರ್ವದೈವ ।

ಸ ಕಸ್ಯಚಿನ್ನ ವಶೇ ವಾಸುದೇವಃ ಪರಾತ್ ಪರಃ ಪರಮೋSಸೌ ಸ್ವತನ್ತ್ರಃ             ॥೨೨.೮೫॥

ಸ್ವಭಾವವನ್ನೇ ಯೋಗ್ಯತಾ, ಹಠ ಎಂದೂ ಕರೆಯುತ್ತಾರೆ,

ಅನಾದಿಸಿದ್ಧವಾಗಿ ಎಲ್ಲಾ ಜೀವರಲ್ಲಿರುವ ನಿತ್ಯಸತ್ಯ ಧಾರೆ.

ಅದು ಮೊದಲನೇ ಕಾರಣವಾದರೆ ಎರಡನೆಯದು ಅನಾದಿ ಕರ್ಮ,

ಅದೇ ಅನಾದಿಕಾಲದಿಂದ ನಡೆದು ಬಂದಿರುವ ಮಾನಸಿಕ ಕರ್ಮ.

ಆ ಕರ್ಮದಿಂದಲೇ ಜೀವನಿಗೆ ದೊರೆವುದು ಜನ್ಮ,

ಆ ಜನ್ಮದ ಕರ್ಮಗಳಿಂದ ಮರುಜನ್ಮದ ಮರ್ಮ.

ಮೂರನೆಯದು ಜೀವರ ಪ್ರಯತ್ನ -ಪೌರುಷ,

ಮೂರೂ ವಿಷ್ಣುವಶ-ಅವನ್ಯಾರ ವಶವಿರದ ಈಶ.

 

ಹಠಶ್ಚಾಸೌ ತಾರತಮ್ಯಸ್ಥಿತೋ ಹಿ ಬ್ರಹ್ಮಾಣಮಾರಭ್ಯ ಕಲಿಶ್ಚ ಯಾವತ್ ।

ಹಠಾಚ್ಚ ಕರ್ಮ್ಮಾಣಿ ಭವನ್ತಿ ಕರ್ಮ್ಮಜೋ ಯತ್ನೋ ಯತ್ನೋ ಹಠಕರ್ಮ್ಮಪ್ರಯೋಕ್ತಾ ॥೨೨.೮೬॥

ಜೀವ ಯೋಗ್ಯತೆಯಲ್ಲಿ ಹಾಸುಹೊಕ್ಕಾಗಿದೆ ತಾರತಮ್ಯ,

ಹೊರತಲ್ಲದಕೆ ಕಲಿಯಿಂದಾರಂಭಿಸಿ ಜೀವೋತ್ತಮ ಬ್ರಹ್ಮ.

ಜೀವಯೋಗ್ಯತೆಯಲ್ಲಿ ಉತ್ತಮ -ಮಧ್ಯಮ - ಅಧಮಗಳ ಏರಿಳಿತ,

ಯೋಗ್ಯತಾನುಸಾರವಾಗಿ ಕರ್ಮಗಳು ಅದರ ಯತ್ನಗಳು ರೂಪಿತ.

ಜೀವಯೋಗ್ಯತೆ, ಪುರುಷಪ್ರಯತ್ನ: ಕರ್ಮ ವಿಕಾಸಕ್ಕೆ ಅವಲಂಬಿತ .

 

ವಿನಾ ಯತ್ನಂ ನ ಹಠೋ ನಾಪಿ ಕರ್ಮ್ಮ ಫಲಪ್ರದೌ ವಾಸುದೇವೋSಖಿಲಸ್ಯ ।

ಸ್ವಾತನ್ತ್ರ್ಯಶಕ್ತೇರ್ವಿನಿಯಾಮಕೋ ಹಿ ತಥಾSಪ್ಯೇತಾನ್ ಸೋSಪ್ಯಪೇಕ್ಷೈವ ಯುಞ್ಜೇತ್ ॥೨೨.೮೭॥

ಪ್ರಯತ್ನವೇ ಇರದ ಜೀವಯೋಗ್ಯತೆಗಿಲ್ಲ ಬೆಲೆ,

ಅನಾದಿಕರ್ಮವೊಂದೇ ಕೊಡದು ಫಲದ ನೆಲೆ.

ವಾಸುದೇವನೇ ಎಲ್ಲಾ ಸ್ವಾತಂತ್ರ್ಯ ಶಕ್ತಿಗೂ ನಿಯಾಮಕ,

ಪ್ರಯತ್ನ ಯೋಗ್ಯತೆ ಕರ್ಮಗಳಂತೇ ಮತಿ ಗತಿಗಳ ಪ್ರೇರಕ.

 

[ಹಾಗಿದ್ದರೆ ಭಗವಂತ ಅಸ್ವತಂತ್ರನೇ-ಎಂದರೆ ಹೇಳುತ್ತಾರೆ: ]

 

ಏತಾನಪೇಕ್ಷ್ಯೈವ ಫಲಂ ದದಾನೀತ್ಯಸ್ಯೈವ ಸಙ್ಕಲ್ಪ ಇತಿ ಸ್ವತನ್ತ್ರತಾ ।

ನಾಸ್ಯಾಪಗಚ್ಛೇತ್ ಸ ಹಿ ಸರ್ವಶಕ್ತಿರ್ನ್ನಾಶಕ್ತತಾ ಕ್ವಚಿದಸ್ಯ ಪ್ರಭುತ್ವಾತ್ ॥೨೨.೮೮॥

ಇವುಗಳ ಆಧಾರದ ಮೇಲೆಯೇ ಫಲ ಕೊಡುವುದವನ ಸಂಕಲ್ಪ,

ಅದಕ್ಕೇ ಅವನಿಗನ್ನುವರು ಸರ್ವಸ್ವತಂತ್ರನಾದ ಸತ್ಯಸಂಕಲ್ಪ.

ಅವನ ಸ್ವಾತಂತ್ರ್ಯಕ್ಕಿಲ್ಲ ಎಂದೂ ನಾಶ,

ಇಟ್ಟುಕೊಂಡಿದ್ದಾನೆ ಎಲ್ಲವನ್ನೂ ತನ್ನ ವಶ.

ಅವನದು ಸರ್ವಸಮರ್ಥವಾದ ಅದ್ವಿತೀಯ ಶಕ್ತಿ,

ಅಲ್ಲಿ ನುಸುಳಲಾರದು ಎಂದೂ ಯಾವದೇ ಅಶಕ್ತಿ.

 [Contributed by Shri Govind Magal]

Wednesday, 18 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 75-82

 

ಇತೀರಿತೋ ಧರ್ಮ್ಮಜಃ ಕೃಷ್ಣಯೈವ ನಿರುತ್ತರತ್ವಂ ಗಮಿತಸ್ತ್ವಭತ್ಸಯತ್ ।

ಕುತರ್ಕ್ಕಮಾಶ್ರಿತ್ಯ ಹರೇರಪಿ ತ್ವಮಸ್ವಾತನ್ತ್ರ್ಯಂ ಸಾಧಯಸೀತಿ ಚೋಕ್ತ್ವಾ ॥೨೨.೭೫॥

 

ಈ ರೀತಿ ದ್ರೌಪದಿ ಹೇಳಿದಾಗ ನಿರುತ್ತರನಾದ ಧರ್ಮರಾಯ ಹೇಳುವ,

ನಾರಾಯಣಗೂ ಅಸ್ವಾತಂತ್ರ್ಯ ಹೇಳುತ್ತಿರುವಿ ಹೊಂದಿ ಕುತರ್ಕದಾಶ್ರಯ,

ಉತ್ತರಿಸಲಾಗದ ಧರ್ಮರಾಯ ದ್ರೌಪದಿಯನ್ನು ಬೈದು ಸುಮ್ಮನಾಗುವ.

 

ಛಲೇನ ತೇನ ಪ್ರತಿಭತ್ಸಿತಾ ಸಾ ಕ್ಷಮಾಪಯಾಮಾಸ ನೃಪಂ ಯತಃ ಸ್ತ್ರೀ ।

ವಾಚಾಳತಾ ನಾತಿತರಾಂ ಹಿ ಶೋಭತೇ ಸ್ತ್ರೀಣಾಂ ತತಃ ಪ್ರಾಹ ವೃಕೋದರಸ್ತಮ್ ॥೨೨.೭೬॥

ಧರ್ಮರಾಜ ದ್ರೌಪದಿಯ ಬೈಯ್ಯುತ್ತಾನೆ ಕುತರ್ಕ ಬಲದಿಂದ,

ದ್ರೌಪದಿ ಕ್ಷಮೆ ಬೇಡುತ್ತಾಳೆ :ಸ್ತ್ರೀ ಆದರ್ಶವಾದ ತಾಳ್ಮೆಯಿಂದ.

ಏಕೆಂದರೆ ಶೋಭಿಸದು ಹೆಂಗಸರಿಗೆ ವಾಚಾಳತನ,

ಧರ್ಮರಾಜನ ಮಾತನಾಡಿಸುತ್ತಾನೆ ಭೀಮಸೇನ.

 

ರಾಜನ್ ವಿಷ್ಣುಃ ಸರ್ವಕರ್ತ್ತಾ ನಚಾನ್ಯಸ್ತತ್ತನ್ತ್ರಮೇವಾನ್ಯದಸೌ ಸ್ವತನ್ತ್ರಃ ।

ತಥಾsಪಿ ಪುಂಸಾ ವಿಹಿತಂ ಸ್ವಕರ್ಮ್ಮ ಕಾರ್ಯ್ಯಂ ತ್ಯಾಜ್ಯಂ ಚಾನ್ಯದತ್ಯನ್ತಯತ್ನಾತ್ ॥೨೨.೭೭॥

ಧರ್ಮರಾಜನೇ, ನಾರಾಯಣನೇ ಸರ್ವಕರ್ತ,

ಬೇರ್ಯಾವ ಜೀವನೂ ಸರ್ವಕರ್ತನಲ್ಲ:ಸತ್ಯ.

ಅವನಿಗಿಂತ ಬೇರೆಯಾದುದೆಲ್ಲಾ ಅವನಧೀನ,

ತನ್ನಧೀನದಲ್ಲೇ ತಾನಿದ್ದಾನೆ ಅವ ನಾರಾಯಣ.

ಜೀವ ವಿಹಿತ ಸ್ವಕರ್ಮಗಳ ಮಾಡಲೇಬೇಕು,

ಅವಿಹಿತ ಕುಕರ್ಮಗಳನ್ನು ಬಿಡಲೇಬೇಕು.

 

ಪ್ರತ್ಯಕ್ಷಮೇತತ್ ಪುರುಷಸ್ಯ ಕರ್ಮ್ಮ ತೇನಾನುಮೇಯಾ ಪ್ರೇರಣಾ ಕೇಶವಸ್ಯ ।

ಸ್ವಕರ್ಮ್ಮ ಕೃತ್ವಾ ವಿಹಿತಂ ಹಿ ವಿಷ್ಣುನಾ ತತ್ಪ್ರೇರಣೇತ್ಯೇವ ಬುಧೋSನುಮನ್ಯತೇ ॥೨೨.೭೮॥

ಜೀವ ಮಾಡುವ ಕರ್ಮವು ಪ್ರತ್ಯಕ್ಷ ಸಿದ್ಧ,

ಅದರನುಭವಕ್ಕೂ ಜೀವನಾಗುತ್ತಾನೆ ಬದ್ಧ.

ಅರಿತ ಜೀವಕ್ಕೆ ಅದು ನಾರಾಯಣನ ಪ್ರೇರಣೆ,

ಜ್ಞಾನಿಗದು ದೈವ ಕೊಟ್ಟ ಸದವಕಾಶದ ಕರುಣೆ.

 

ತೇನೈತಿ ಸಮ್ಯಗ್ಗತಿಮಸ್ಯ ವಿಷ್ಣೋರ್ಜ್ಜನೋSಶುಭೋ ದೈವಮಿತ್ಯೇವ ಮತ್ವಾ ।

ಹಿತ್ವಾ ಸ್ವಕಂ ಕರ್ಮ್ಮ ಗತಿಂ ಚ ತಾಮಸೀಂ ಪ್ರಯಾತಿ ತಸ್ಮಾತ್ ಕಾರ್ಯ್ಯಮೇವ ಸ್ವಕರ್ಮ್ಮ             ॥೨೨.೭೯॥

 

ಈ ರೀತಿಯಾಗಿ ಮಾಡುವುದರಿಂದ ಅಂಥವರಿಗೆ ಆಗುತ್ತದೆ ಸದ್ಗತಿ,

ಎಲ್ಲಾ ದೈವದ್ದೇ ಎಂಬ ಕುಬುದ್ಧಿಯವರಿಗೆ ಕತ್ತಲ ನರಕವೇ ಗತಿ.

ಅದು ಜವಾಬ್ದಾರಿ ಇರದ ಸೋಮಾರಿಗಳ ಸರ್ವ ಕರ್ತೃತ್ವವಾದ,

ದೈವದಲ್ಲಿ ನಂಬಿಕೆ ಇರದ ತಮ್ಮ ಕೆಲಸ ಮಾಡದ ಪಲಾಯನವಾದ.

ಜೀವರಿಗೆ ಸ್ವವಿಹಿತ ಕರ್ಮವು ಇದ್ದೇ ಇದೆ ಎಂಬ ಮಾತದು ಸಿದ್ಧ.

 

ಜ್ಞಾತವ್ಯಂ ಚೈವಾಸ್ಯ ವಿಷ್ಣೋರ್ವಶತ್ವಂ ಕರ್ತ್ತವ್ಯಂ ಚೈವಾsತ್ಮನಃ ಕಾರ್ಯ್ಯಕರ್ಮ್ಮ ।

ಪ್ರತ್ಯಕ್ಷೈಷಾ ಕರ್ತ್ತೃತಾ ಜೀವಸಂಸ್ಥಾ ತಥಾSSಗಮಾದನುಮಾನಾಚ್ಚ ಸರ್ವಮ್ ॥೨೨.೮೦॥

ಇರಬೇಕು -ಜಗತ್ತೆಲ್ಲವೂ ಭಗವದಧೀನ ಎಂಬ ಜ್ಞಾನ,

ನಡೆದಿರಬೇಕು ಸ್ವವಿಹಿತ ಕರ್ತವ್ಯ ಪಾಲನೆಯ ಯಾನ.

ಜೀವನಲ್ಲಿರುವಂಥ ಕತೃತ್ವವು ಪ್ರತ್ಯಕ್ಷ ಗೋಚರ,

ಆಗಮ ಅನುಮಾನಗಳಿಂದದು ದೈವ ವ್ಯಾಪಾರ.

ಭಗವಂತನ ವಶವಾದ ಅದು ಅವನ ಸ್ವತಂತ್ರ ಕತೃತ್ವ,

ಜೀವನಿಗದು ದೈವದತ್ತವಾದದ್ದು ಎಂಬುದು ಸಿದ್ಧ ತತ್ವ.

 

ವಿಷ್ಣೋರ್ವಶೇ ತನ್ನ ಹೇಯಂ ದ್ವಯಂ ಚ ಜಾನನ್ ವಿದ್ವಾನ್ ಕುರುತೇ ಕಾರ್ಯ್ಯಕರ್ಮ್ಮ ।

ತತ್ಪ್ರೇರಕಂ ವಿಷ್ಣುಮೇವಾಭಿಜಾನನ್ ಭವೇತ್ ಪ್ರಮಾಣತ್ರಿತಯಾನುಗಾಮೀ ॥೨೨.೮೧॥

ದೈವದ ಕತೃತ್ವ ಮತ್ತು ಜೀವನ ಕತೃತ್ವ,

ಎರಡೂ ತಿರಸ್ಕರಿಸಲಾಗದಂಥ ತತ್ವ.

ಅವೆರಡೂ ಇರುವುದು ನಾರಾಯಣನ ವಶ,

ತಿಳಿದವನ ಕರ್ಮಕ್ಕಿರುತ್ತದೆ ಜ್ಞಾನದ ಪಾಶ.

ತನ್ನ ಪಾಲಿಗೆ ಬಂದ ಕರ್ಮವನ್ನು ಮಾಡುತ್ತಾನೆ,

ಭಗವಂತ ಪ್ರೇರಿಸಿದ್ದೇ ಎಂದು ಅನುಸರಿಸುತ್ತಾನೆ.

ಪ್ರತ್ಯಕ್ಷ, ಅನುಮಾನ, ಆಗಮಗಳು ಪ್ರಮಾಣ,

ಏನೇ ಸಿದ್ಧವಾಗಬೇಕಾದರೂ ಈ ಮೂರೇ ಹೂರಣ.

 

ಪೂರ್ಣ್ಣಂ ಪ್ರಮಾಣಂ ತತ್ತ್ರಯಂ ಚಾವಿರೋಧೇನೈಕತ್ರಸ್ಥಂ ತತ್ ತ್ರಯಂ ಚಾವಿರೋಧಿ ।

ಪೃಥಙ್ ಮದ್ಧ್ಯಂ ಚಾಪ್ರಮಾಣಂ ವಿರೋಧಿ ಸ್ಯಾತ್ ತತ್ ತಸ್ಮಾತ್ ತ್ರಯಮೇಕತ್ರ ಕಾರ್ಯ್ಯಮ್॥೨೨.೮೨॥

ವಿರೋಧವಿರದಂತೆ ಇರಬೇಕು ಮೂರೂ ಪ್ರಮಾಣ,

ಸಿದ್ಧವಾಗುವುದಿಲ್ಲ ಯಾವುದೂ ಇದ್ದರೆ ಬರೀ ಅನುಮಾನ.

ಇರಲು ಪ್ರತ್ಯಕ್ಷ ಆಗಮ ಅನುಮಾನಗಳ ಸಮನ್ವಯ,

ಗಟ್ಟಿ ಹಾಕುತ್ತದೆ ಒಳ್ಳೆಯ ಜೀವನದ ನಡೆಗೆ ಅಡಿಪಾಯ.

 [Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 68-74

 

[ಹದಿನಾಲ್ಕನೇ ವರ್ಷದಲ್ಲಿಯಾದರೂ ಧರ್ಮರಾಜ ಅಧರ್ಮಿಗಳ ವಿರುದ್ಧ ಯುದ್ಧಕ್ಕೆ ತೆರಳಬೇಕು, ಆ ಗುರಿ ಮುಟ್ಟಲು ತೀವ್ರವಾದ ಮಾತಿನೌಷಧವನ್ನು ಕೊಡಬೇಕು -ಅದಕ್ಕಾಗಿ ಭೀಮ ದ್ರೌಪದಿಯನ್ನು ಕಳುಹಿಸಿದ. ಅವಳು ಧರ್ಮರಾಜನನ್ನು ಕುರಿತು ಮಾತನಾಡಿದಳು:]

 

ನೈವ ಕ್ಷಮಾ ಕುಜನತಾಸು ನೃಪಸ್ಯ ಧರ್ಮ್ಮಸ್ತಾಂ ತ್ವಂ ವೃಥೈವ ಧೃತವಾನಸಿ ಸರ್ವಕಾಲಮ್ ।

ಇತ್ಯುಕ್ತ ಆಹ ನೃಪತಿಃ ಪರಮಾ ಕ್ಷಮೈವ ಸರ್ವತ್ರ ತದ್ವಿಧೃತಮೇವ ಜಗತ್ ಸಮಸ್ತಮ್ ॥೨೨.೬೮॥

 

ಕರ್ತ್ತಾ ಚ ಸರ್ವಜಗತಃ ಸುಖದುಃಖಯೋರ್ಹಿ ನಾರಾಯಣಸ್ತದನುದತ್ತಮಿಹಾಸ್ಯ ಸರ್ವಮ್ ।

ತಸ್ಮಾನ್ನ ಕೋಪವಿಷಯೋsಸ್ತಿ ಕುತಶ್ಚ ಕಶ್ಚಿತ್ ತಸ್ಮಾತ್ಕ್ಷಮೈವ ಸಕಲೇಷು ಪರೋSಸ್ಯ ಧರ್ಮ್ಮಃ ॥೨೨.೬೯॥

ದುರ್ಜನರಲ್ಲಿ ಸಹನೆಯು ಒಳ್ಳೆಯದಲ್ಲ, ಕೆಟ್ಟವರಲ್ಲಿ ಸಹನೆಯು ಎಂದೂ ಸಲ್ಲ.

ಕ್ಷಮಿಸುವುದವರನ್ನು ಪಾಪಕ್ಕೆ ಕಾರಣ, ನಿನ್ನದು ಯಾವಾಗಲೂ ಕ್ಷಮಾಧಾರಣ.

ಇದನ್ನೆಲ್ಲಾ ಕೇಳಿಸಿಕೊಂಡ ಧರ್ಮರಾಜ ಹೇಳುತ್ತಾನೆ, ಕ್ಷಮೆಯೇ ಒಳ್ಳೆಯದು :ಅದರಿಂದಲೇ ಜಗದ ಚಾಲನೆ.

ಪ್ರಪಂಚಕ್ಕೆಲ್ಲಾ ಸುಖ ದುಃಖ ಕೊಡುವವನು ಶ್ರೀಹರಿ, ಸಿಟ್ಟಾಗದೇ ಅವನು ಕೊಟ್ಟದ್ದನ್ನು ಒಪ್ಪುವುದೇ ಸರಿ.

ಪ್ರತಿಯೊಂದೂ ಭಗವಂತನ ಪ್ರೇರಣೆ, ಸಲ್ಲದು ಯಾರಲ್ಲೂ ಕೋಪದ ಧೋರಣೆ.

ಕ್ಷಮೆಯೊಂದೇ ಪರಮ ಧರ್ಮ, ನನ್ನ ಪ್ರಯತ್ನವೇನಿಲ್ಲ ಎಂಬ ಮರ್ಮ.

 

ಇತ್ಯುಕ್ತವನ್ತಂ ನೃಪಮಾಹ ಪಾರ್ಷತೀ ಯದಿ ಕ್ಷಮಾ ಸರ್ವನರೇಷು ಧರ್ಮ್ಮಃ ।

ರಾಜ್ಞಾ ನ ಕೃತ್ಯಂ ನಚ ಲೋಕಯಾತ್ರಾ ಭವೇಜ್ಜಗತ್ ಕಾಪುರುಷೈರ್ವಿನಶ್ಯೇತ್ ॥೨೨.೭೦॥

ಹೀಗೆಂದ ಧರ್ಮರಾಜನಿಗೆ ದ್ರೌಪದಿ ಹೇಳುತ್ತಾಳೆ, ಕ್ಷಮೆಯೇ ಸಾಕಾದರೆ ರಾಜನೇಕೆಂದು ಕೇಳುತ್ತಾಳೆ.

ಲೋಕದ ನಡವಳಿಕೆಗೆ ಏನಿರುತ್ತದೆ ಅರ್ಥ, ರಾಜ ದೇಶ ಸಂವಿಧಾನ ಎಲ್ಲವೂ ವ್ಯರ್ಥ.

ಸ್ತಬ್ದವಾಗುತ್ತದೆ ಲೋಕದ ವ್ಯವಹಾರ, ಹೇಡಿಗಳಿಂದಾಗುತ್ತದೆ ಜಗದ ಸಂಹಾರ.

 

ಸತ್ಯಂ ಚ ವಿಷ್ಣುಃ ಸಕಲಪ್ರವರ್ತ್ತಕೋ ರಮಾವಿರಿಞ್ಚೇಶಪುರಸ್ಸರಾಶ್ಚ ।

ಕಾಷ್ಠಾದಿವತ್ ತದ್ವಶಗಾಃ ಸಮಸ್ತಾಸ್ತಥಾsಪಿ ನ ವ್ಯರ್ತ್ಥತಾ ಪೌರುಷಸ್ಯ ॥೨೨.೭೧॥

ಸರ್ವತಂತ್ರ ಸ್ವತಂತ್ರ ನಾರಾಯಣನೇ ಸಕಲ ಪ್ರವರ್ತಕನೆನ್ನುವುದು ಪರಮ ಸತ್ಯ,

ಲಕ್ಷ್ಮೀ ಬ್ರಹ್ಮ ರುದ್ರಾದಿ ದೇವತೆಗಳು ಅವನ ಬೊಂಬೆಗಳಂತೆಂಬುದೂ ಸಮ್ಮತ.

ಇಷ್ಟಿದ್ದರೂ ಪುರುಷ ಪ್ರಯತ್ನ ಆಗುವುದಿಲ್ಲ ವ್ಯರ್ಥ,

ಪುರುಷ ಪ್ರಯತ್ನವೇ ಬೇಡವೆಂಬುದದು ಅಸಂಗತ.

 

ತದಾಜ್ಞಯಾ ಪುರುಷಶ್ಚೇಷ್ಟಮಾನಶ್ಚೇಷ್ಟಾನುಸಾರೇಣ ಶುಭಾಶುಭಸ್ಯ ।

ಭೋಕ್ತಾ ನ ತಚ್ಚೇಷ್ಟಿತಮನ್ಯಥಾ ಭವೇತ್ ಕರ್ತ್ತಾ ತಸ್ಮಾತ್ ಪುರುಷೋSಪ್ಯಸ್ಯ ವಶ್ಯಃ ॥೨೨.೭೨॥

ಭಗವಂತನ ಆಜ್ಞೆಯಿಂದಲೇ ಕ್ರಿಯೆಗಳನ್ನು ಮಾಡುತ್ತಾನೆ ಜೀವ,

ಆ ಕ್ರಿಯೆಗಳಿಗನುಗುಣವಾಗಿ ಅವನಿಗೆ ಪಾಪ ಪುಣ್ಯಗಳ ಪ್ರಭಾವ.

ಕೆಟ್ಟದ್ದನ್ನು ಮಾಡಿದರೆ ಬರುವುದು ದುಃಖ -ಪಾಪ,

ಒಳ್ಳೆಯದನ್ನು ಮಾಡಿದರೆ ಸುಖ-ಪುಣ್ಯದ ಲೇಪ.

ಜೀವನಲ್ಲಿ ಇರುವುದು ಭಗವದ್ ವಶವಾದಂಥ ಕರ್ತೃತ್ವ,

ಅಸ್ವತಂತ್ರ ಕರ್ತೃತ್ವವಿದೆ:ಕರ್ತೃತ್ವವೇ ಇಲ್ಲವೆಂದಲ್ಲ ತತ್ವ.

 

ವೃಥಾ ಯದಿ ಸ್ಯಾತ್ ಪೌರುಷಂ ಕಸ್ಯ ಹೇತೋರ್ವಿಧಿರ್ನ್ನಿಷೇಧಶ್ಚ ಸಮಸ್ತವೇದಗಃ ।

ವಿಧೇರ್ನ್ನಿಷೇಧಸ್ಯ ಚ ನೈವ ಗೋಚರಃ ಪುಮಾನ್ ಯದಿ ಸ್ಯಾದ್ ಭವತೋ ಹಿ ತೌ ಹರೇಃ ॥೨೨.೭೩॥

ಪುರುಷ ಪ್ರಯತ್ನ ವ್ಯರ್ಥವಾದರೆ ವಿಧಿ ನಿಷೇಧ ಯಾರಿಗೆ?

ಜೀವ ಕರ್ತೃವಲ್ಲವಾದರೆ ವಿಧಿನಿಷೇಧ ಹೇಳಿದ್ದು ದೇವರಿಗೆ?

 

ತೇನೈವ ಲೇಪಶ್ಚ ಭವೇದಮುಷ್ಯ ಪುಣ್ಯೇನ ಪಾಪೇನ ಚ ನೈವ ಚಾಸೌ ।

ಲಿಪ್ಯೇತ ತಾಭ್ಯಾಂ ಪರಮಸ್ವತನ್ತ್ರಃ ಕರ್ತ್ತಾ ತತಃ ಪುರುಷೋSಪ್ಯಸ್ಯ ವಶ್ಯಃ ॥೨೨.೭೪॥

ಒಂದೊಮ್ಮೆ ದೇವರಿಗೆ ಹೇಳಿದ್ದರೆ ಅವನಿಗೆ ಪುಣ್ಯ ಪಾಪದ ಲೇಪ,

ಏನೂ ಮಾಡದ ಜೀವಗೆಲ್ಲಿಂದ ಬಂದೀತು ಪುಣ್ಯ ಅಥವಾ ಪಾಪ.

ಸರ್ವಸ್ವತಂತ್ರ ನಿರತಿಶಯ ಕರ್ತೃ ಹರಿಗೆ ಏನೇನೋ ಕಟ್ಟುಪಾಡು,

ಪುಣ್ಯ ಪಾಪಗಳ ಲೇಪವಾಗಿ ಅವನ ಸ್ವಾತಂತ್ರ್ಯ ನಾಶಕ್ಕದು ಜಾಡು.

ಹಾಗೊಮ್ಮೆ ಆದರೆ ಭಗವದ್ ಸ್ವಾತಂತ್ರ್ಯದ ನಾಶ,

ಕಳಚಿ ಹೋಗುತ್ತದೆ ಜಗದ್ ವ್ಯವಸ್ಥೆಯ ಪಾಶ.

ಭಗವಂತ ಎಂದೂ ಸರ್ವಸ್ವತಂತ್ರ ಸರ್ವೋತ್ತಮ,

ಅವನಧೀನವಾಗಿಯೇ ಜೀವನ ಕರ್ಮದ ಮರ್ಮ.

ಎಂದೂ ಪುಣ್ಯ ಪಾಪಗಳ ಲೇಪವಿರದವನು ಭಗವಂತ,

ಅವನಧೀನ ಕರ್ತೃವಾಗಿ ಜೀವನ ಕರ್ಮವೆಂಬುದು ಸಮ್ಮತ.


 [Contributed by Shri Govind Magal]