Friday, 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 343-349

 

ಯುಧಿಷ್ಠಿರೋ ದುಃಖಹೇತುಸ್ತವೈಕೋ ಯದ್ಯೇನಮನ್ಯೇ ನ ಗುರುರ್ನ್ನ ಏಷಃ ।

ಇತಿ ಬ್ರೂಯುರಥವಾ ಭೀಮಪಾರ್ತ್ಥಾವೇಕೋsಪಿವಾ ಭೀಮ ಇಹೋತ್ಸೃಜೇ ತ್ವಾಮ್ ॥೨೧.೩೪೩॥

ಜೋರಾಗಿ ಸಭೆಗೆ ಕೇಳುವಂತೆ ಧರ್ಮರಾಯನೇ ನಮ್ಮ ದುಃಖಕ್ಕೆ ಕಾರಣ,

ಅವನು ನಮಗೆ ಹಿರಿಯನಾಗಿ ಉಳಿದಿಲ್ಲ ಎಂದು ಹೇಳಲಿ ಭೀಮಾರ್ಜುನ.

ಭೀಮನೊಬ್ಬ ಹೇಳಿದರೂ ನಿಮ್ಮನ್ನೆಲ್ಲಾ ಬಿಡ್ತೇನೆ ಅಂತಾನೆ ದುರ್ಯೋಧನ.

 

ಇತ್ಯುಕ್ತ ಊಚೇ ಪವಮಾನುಸೂನುಃ ಪೂಜ್ಯೋSಸ್ಮಾಕಂ ಧರ್ಮ್ಮಜೋSಸಂಶಯೇನ ।

ಗುರುಶ್ಚಾಹಂ ವೋSಖಿಲಾನಾಂ ಯತೋ ಹಿ ಬಲಜ್ಯೇಷ್ಠಂ ಕ್ಷತ್ರಮಾಹುರ್ಮ್ಮಹಾನ್ತಃ ॥೨೧.೩೪೪॥

ಹೀಗೆ ಹೇಳಿದಾಗ ಭೀಮಸೇನ ಹೇಳುತ್ತಾನೆ,

ಧರ್ಮಜ ನಮಗೆ ಶಂಕೆಯಿರದ ಪೂಜ್ಯನಾಗಿದ್ದಾನೆ.

ನಾನು ಈ ಸಭೆಯಲ್ಲಿ ಸೇರಿದ ಎಲ್ಲರಿಗೂ ಹಿರಿಯ,

ಕ್ಷತ್ರಿಯರಲ್ಲಿ ಬಲಜ್ಯೇಷ್ಠನು ಹಿರಿಯನೆಂಬ ಭಾವ.

 

ಬಲಜ್ಯೇಷ್ಠ್ಯೇ ಯದಿ ವಃ ಸಂಶಯಃ ಸ್ಯಾದುತ್ತಿಷ್ಠಧ್ವಂ ಸರ್ವ ಏವಾದ್ಯ ವೀರಾಃ ।

ಮೃದ್ನಾಮಿ ವಃ ಪಾದತಳೇನ ಸರ್ವಾನ್ ಸಹಾನುಬನ್ಧಾನ್ ಯಶ್ಚ ಮಾಂ ಯೋದ್ಧುಕಾಮಃ ॥೨೧.೩೪೫॥

ಒಂದೊಮ್ಮೆ ನಿಮಗೆ ನನ್ನ ಬಲಜ್ಯೇಷ್ಠತೆ ಬಗ್ಗೆ ಸಂಶಯವಿದ್ದಲ್ಲಿ,

ಬನ್ನಿ, ನಿಮ್ಮೆಲ್ಲರನ್ನೂ ಕಾಲಡಿಯಲ್ಲಿ ಹೊಸಕಿ ಹಾಕಿಬಿಡುವೆನಿಲ್ಲಿ.

ಯಾರು ಬಯಸುತ್ತಾರೋ ನನ್ನೊಡನೆ ಯುದ್ಧ,

ನಾನವರ ಬಂಧುಗಳನ್ನೂ ಮರ್ದಿಸಲು ಬದ್ಧ.

 

 ಇತಿ ಬ್ರುವನ್ ಸಮುತ್ಥಿತೋ ನದನ್ ವೃಕೋದರೋ ಯದಾ ।

ವಿಘೂರ್ಣ್ಣಿತಾ ಸಭಾSಖಿಲಾ ಭಯಾನ್ನಚಾSಹ ಕಿಞ್ಚನ   ॥೨೧.೩೪೬॥

ಹೀಗೆ ಹೇಳಿ ಘರ್ಜಿಸುತ್ತಾ ನಿಂತ ಭೀಮಸೇನ,

ಕೇಳಿದ ಸಭೆಯಲ್ಲಿ ಭಯದಿಂದಾವರಿಸಿತು ಮೌನ.

 

ಭೀಷ್ಮೋ ದ್ರೋಣೋ ವಿದುರಾದ್ಯಾಃ ಕ್ಷಮಸ್ವ ಸರ್ವಂ ತ್ವಯೋಕ್ತಂ ಸತ್ಯಮಿತ್ಯೇವ ಹಸ್ತೌ ।

ಗೃಹೀತ್ವೈನಂ ಸ್ಥಾಪಯಾಮಾಸುರಸ್ಮಿನ್ ಸ್ಥಿತೇ ಶಾನ್ತಿಂ ಚಾSಪಿರೇ ಧಾರ್ತ್ತರಾಷ್ಟ್ರಾಃ ॥೨೧.೩೪೭॥

ಆಗ ಭೀಷ್ಮ ದ್ರೋಣ ವಿದುರಾದಿಗಳು ಭೀಮಸೇನನನ್ನು ತಡೆಯುತ್ತಾರೆ,

ನೀನ್ಹೇಳುವುದೆಲ್ಲಾ ಸತ್ಯವಾದರೂ ಸಹನೆಯಿರಲಿ ಎಂದವನ ಕೂರಿಸುತ್ತಾರೆ.

ಅವನು ಕುಳಿತಾಗ ದುರ್ಯೋಧನಾದಿಗಳು ನಿರಾಳ ನಿಟ್ಟುಸಿರು ಬಿಡುತ್ತಾರೆ.

 

ನಿವಾರಿತೋ ಧರ್ಮ್ಮಜೇನ ಗುರುಭಿಶ್ಚಾಪರೈಸ್ತದಾ।

ಮಾನನಾರ್ತ್ಥಂ ಗುರೂಣಾಂ ತು ನ ಭೀಮಸ್ತಾನ್ ಜಘಾನ ಹ             ॥೨೧.೩೪೮॥

ಧರ್ಮರಾಜ ಮತ್ತು ಗುರುಹಿರಿಯರಿಂದ ತಡೆ,

ಗೌರವಿಸಿದ ಭೀಮನದು ಯಾರನ್ನು ಕೊಲ್ಲದ ನಡೆ.

 

ನಚಾತ್ಯವರ್ತ್ತತ ಜ್ಯೇಷ್ಠಂ ಧರ್ಮ್ಮಾತ್ಮಾನಂ ಯುಧಿಷ್ಠಿರಮ್ ।

ತೇಷಾಂ ಪಾಪಾಭಿವೃದ್ಧ್ಯರ್ತ್ಥಂ ಜ್ಯೇಷ್ಠವೃತ್ತಿಂ ಚ ದರ್ಶಯನ್ ॥೨೧.೩೪೯॥

ಧರ್ಮಜನಾದ ಅಣ್ಣನ ಮೀರಿ ನಡೆಯಲಿಲ್ಲ ಭೀಮಸೇನ,

ಆಗಬೇಕಿತ್ತು ದುರ್ಯೋಧನಾದಿಗಳ ಪಾಪದ ಅನಾವರಣ.

ಅವರೆಲ್ಲರ ಪಾಪದ ಕೊಡ ತುಂಬಲು ಬೇಕಿತ್ತು ಕಾಲ,

ಭೀಮನದು ಅಣ್ಣನನುಸರಿಸುವ ತಮ್ಮನ ಧರ್ಮದ ತಾಳ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula