Friday, 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 357-362

 

ದುಃಶಾಸನೈಷಾಂ ವಾಸಾಂಸಿ ದಾಸಾನಾಂ ನೋ ವ್ಯಪಾಕುರು ।

ಇತ್ಯುಕ್ತೋSಭ್ಯಗಮತ್ ಪಾರ್ತ್ಥಾನ್ ಸ್ವವಾಸಾಂಸ್ಯಥ ತೇ ದದುಃ             ॥೨೧.೩೫೭॥

 

ತೇ ಚರ್ಮ್ಮವಸನಾ ಭೂತ್ವಾ ತಾನಶಿಷ್ಟಾನ್ ಪ್ರಕಾಶ್ಯ ಚ ।

ನಿಷೇದುಶ್ಚ ಕ್ಷಮಾಯಾನ್ತೇ ಕ್ಷಮಾಮಾಲಮ್ಬ್ಯ ವಿಸ್ತೃತಾಮ್                    ॥೨೧.೩೫೮॥

ದುರ್ಯೋಧನ ತನ್ನ ತಮ್ಮ ದುಶ್ಯಾಸನಗೆ ಹೇಳುತ್ತಾನೆ,

ಇವರ ಬಟ್ಟೆಗಳ ತೆಗೆ, ಈಗಿವರು ನಮ್ಮ ದಾಸರು ತಾನೇ.

ಪಾಂಡವರು ತಮ್ಮ ರಾಜವಸ್ತ್ರಗಳನ್ನು ಬಿಚ್ಚಿ ಕೊಡುತ್ತಾರೆ,

ಒರಟಾದ ಅಜಿನ ವಸ್ತ್ರಗಳನ್ನು ತಮ್ಮ ಮೈಗೆ ಸುತ್ತಿಕೊಳ್ಳುತ್ತಾರೆ.

ಅವರು ದುರ್ಯೋಧನಾದಿಗಳ ದುಷ್ಟತನ ತಮ್ಮ ಮೌನದಿ ತೋರಿಸುತ್ತಾರೆ,

ಉನ್ನತ ಆಸನಗಳ ಬಿಟ್ಟಿಳಿದು ಬಹು ಸಹನೆಯಲಿ ನೆಲದಿ ಕುಳಿತುಕೊಳ್ಳುತ್ತಾರೆ.

 

ಪುನರ್ದ್ದುರ್ಯ್ಯೋಧನೇನೋಕ್ತಃ ಪಾರ್ತ್ಥಾನಾಮಥ ಪಶ್ಯತಾಮ್ ।

ಚಕರ್ಷ ವಾಸೋ ದ್ರೌಪದ್ಯಾಸ್ತದಾSವಾದೀದ್ ವೃಕೋದರಃ             ॥೨೧.೩೫೯॥

ಮತ್ತೆ ದುರ್ಯೋಧನನಿಂದ ಪ್ರಚೋದಿತನಾದ ದುಶ್ಯಾಸನ,

ಪಾಂಡವರೆದುರೇ ಮಾಡುತ್ತಾನೆ ದ್ರೌಪದಿಯ ವಸ್ತ್ರಾಪಹರಣ.

ಆಗ ಹೇಳುತ್ತಾನೆ -ಎಲ್ಲವನ್ನೂ ಗಮನಿಸುತ್ತಿದ್ದ ಭೀಮಸೇನ.

 

ಪಾಪೇಷು ಪೂರ್ವಸ್ಯ ತಥಾSಧಮಸ್ಯ ವಂಶೇ ಕುರೂಣಾಮುರುಧರ್ಮ್ಮಶೀಲಿನಾಮ್ ।

ದುಃಶಾಸನಸ್ಯಾಸ್ಯ ವಿದಾರ್ಯ್ಯ ವಕ್ಷಃ ಪಿಬಾಮಿ ರಕ್ತಂ ಜಗತಃ ಸಮಕ್ಷಮ್             ॥೨೧.೩೬೦॥

ಪಾಪಿಗಳಲ್ಲೇ ಅಗ್ರಗಣ್ಯನಾದವನು ದುಶ್ಯಾಸನ,

ಧರ್ಮವಾಚರಿಸುತ್ತಾ ಬಂದಿದೆ ಕುರು ಮನೆತನ.

ಮಹಾಧಮನಾದ ದುಶ್ಯಾಸನನ ಎದೆ ಬಗೆಯುತ್ತೇನೆ,

ಜಗದೆದುರಲ್ಲೇ ಅವನೆದೆಯ ಬಿಸಿರಕ್ತ ಕುಡಿಯುತ್ತೇನೆ.

 

ವಿಕೃಷ್ಯಮಾಣೇ ವಸನೇ ತು ಕೃಷ್ಣಾ ಸಸ್ಮಾರ ಕೃಷ್ಣಂ ಸುವಿಶೇಷತೋSಪಿ ।

ತದಾSನ್ಯದಾಸೀದ್ ವಸನಂ ಚ ತಸ್ಯಾ ದಿವ್ಯಂ ಸುಸೂಕ್ಷ್ಮಂ ಕನಕಾವದಾತಮ್             ॥೨೧.೩೬೧॥

ಕೃಷ್ಣಭಕ್ತಳಾದ ದ್ರೌಪದಿಯು ತನ್ನ ವಸ್ತ್ರ ಸೆಳೆಯಲ್ಪಡುತ್ತಿರುವಾಗ,

ಅತ್ಯಂತ ಆರ್ತಳಾಗಿ ವಿಶೇಷವಾಗಿ ಕೃಷ್ಣ ಸ್ಮರಣೆಯ ಮಾಡುವಳಾಗ.

ದ್ರೌಪದಿಯ ಮೈಮೇಲೆ ಇನ್ನೊಂದು ಬೇರೆ ಹಳದಿ ವಸ್ತ್ರವಿರುತ್ತದೆ ಆಗ.

 

ಪುನಃಪುನಶ್ಚೈವ ವಿಕರ್ಷಮಾಣೇ ದುಃಶಾಸನೇSನ್ಯಾನಿ ಚ ತಾದೃಶಾನಿ ।

ಬಭೂವುರನ್ತಂ ನ ಜಗಾಮ ಪಾಪಃ ಶ್ರಾನ್ತೋ ನ್ಯಷೀದತ್ ಸ್ವಿನ್ನಗಾತ್ರಃ ಸಭಾಯಾಮ್ ॥೨೧.೩೬೨॥

ದುಷ್ಟ ಮತ್ತೆ ಮತ್ತೆ ಬಟ್ಟೆಯ ಎಳೆಯುತ್ತಿದ್ದನಾಗ,

ಅಂಥವೇ ಬಟ್ಟೆ ಉದ್ಭವವಾಗುತ್ತಿದ್ದದ್ದು ಸೋಜಿಗ.

ಪಾಪಿಷ್ಠ ದುಶ್ಯಾಸನ ವಸ್ತ್ರದ ಕೊನೆ ಕಾಣದವನಾಗುತ್ತಾನೆ,

ಬಹಳ ಬಳಲಿ ಬೆವರಿ ಹಾಗೇ ಕುಸಿದು ಕುಕ್ಕರಿಸಿಬಿಡುತ್ತಾನೆ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula