Thursday, 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 278-291

 

ಉಪಾಸಿರೇ ಚ ತಾನ್ ನೃಪಾಃ ಸಮಸ್ತಶಃ ಸುಹೃದ್ಗಣಾಃ ।

ತದಾSSಜಗಾಮ ಖಡ್ಗಭೃತ್  ಸಹಾನುಜಃ ಸುಯೋಧನಃ                       ॥೨೧.೨೭೮॥

ಸಹೃದಯ ಮಿತ್ರರಾದ ರಾಜರೆಲ್ಲಾ ಸಮೀಪದಲ್ಲೇ ಕುಳಿತಿರುವಾಗ,

ಖಡ್ಗಧಾರಿ ದುರ್ಯೋಧನ ತಮ್ಮಂದಿರೊಂದಿಗೆ ಸಭೆಗೆ ಬಂದನಾಗ.

 

ದ್ವಾರಂ ಸಭಾಯಾ ಹರಿನೀಲರಶ್ಮಿವ್ಯೂಢಂ ನ ಜಾನನ್ ಸ ವಿಹಾಯ ಭಿತ್ತಿಮ್ ।

ಅಭ್ಯನ್ತರಾಣಾಂ ದೃಶಿ ನೋವಿಘಾತಿನೀಂ ಸಂ ಸ್ಫಾಟಿಕಾಮಾಶು ದೃಢಂ ಚುಚುಮ್ಬೇ ॥೨೧.೨೭೯॥

ಸಭಾಂಗಣದ ದ್ವಾರ ಇಂದ್ರನೀಲಮಣಿ ಪ್ರಕಾಶದಿಂದ ಆಚ್ಛಾದಿತವಾದುದ್ದರಿಂದ,

ನಡೆಯುವಾಗ ಪಾರದರ್ಶಕವಾಗಿ ಕಾಣದಂತಿದ್ದ  ಗೋಡೆಯೊಂದಕ್ಕೆ ಡಿಕ್ಕಿ ಹೊಡೆದ.

 

ಪ್ರವೇಶಯೇತಾಂ ಚ ಯಮೌ ತಮಾಶು ಸಭಾಂ ಭುಜೌ ಗೃಹ್ಯ ನೃಪೋಪದಿಷ್ಟೌ ।

ತತ್ರೋಪವಿಶ್ಯ ಕ್ಷಣಮನ್ಯತೋSಗಾದಮೃಷ್ಯಮಾಣಃ ಶ್ರಿಯಮೇಷು ದಿವ್ಯಾಮ್ ॥೨೧.೨೮೦॥

ಆಗ ಧರ್ಮರಾಜನಿಂದ ಆದೇಶಿಸಲ್ಪಟ್ಟ ನಕುಲ ಸಹದೇವರು,

ದುರ್ಯೋಧನನ ಕೈಹಿಡಿದು ಸಭೆಯ ಪ್ರವೇಶ ಮಾಡಿಸಿದರು.

ಆ ಸಭೆಯಲ್ಲಿ ಸುಧಾರಿಸಿಕೊಳ್ಳುತ್ತಾ ಕೊಂಚ ಹೊತ್ತು ಕುಳಿತಿದ್ದ,

ಪಾಂಡವರ ಸಂಪತ್ತು ವೈಭವ ಸಹಿಸಲಾಗದೇ ಬೇರೆಡೆಗೆ ತೆರಳಿದ.

 

ತತೇನ್ದ್ರನೀಲಭುವಿ ರತ್ನಮಯಾನಿ ದೃಷ್ಟ್ವಾ ಪದ್ಮಾನಿ ನೀರಮನಸಾ ಜಗೃಹೇ ಸ್ವವಸ್ತ್ರಮ್ ।

ರತ್ನೋರುದೀಧಿತಿನಿಗೂಢಜಲಂ ಸ್ಥಲಂ ಚ ಮತ್ವಾ ಪಪಾತ ಸಹಿತೋSವರಜೈರ್ಜ್ಜಲೌಘೇ ॥೨೧.೨೮೧॥

ಅಲಂಕಾರಕ್ಕಿಟ್ಟಿದ್ದ ರತ್ನ ಪದ್ಮಗಳ ಇಂದ್ರನೀಲಿ ಮಣಿಮಯ ನೆಲದಿ ನೋಡಿದ,

ಅಲ್ಲಿ ನೀರಿರಬೇಕೆಂದು ಭ್ರಮಿಸಿ ಬಟ್ಟೆ ಮೇಲೆ ಎತ್ತಿ ಹಿಡಿದುಕೊಂಡು ನಡೆದ.

ನಂತರ ಮುತ್ತು ರತ್ನಗಳ ಪ್ರಭೆಯ ನೀರನ್ನು ನೆಲ ಅಂದುಕೊಂಡ,

ನೆಲವೆಂದು ನಡೆಯುತ್ತಾ ಹೋಗಿ ತಮ್ಮಂದಿರ ಜೊತೆ ನೀರಿಗೆ ಬಿದ್ದ.

 

ತಂ ಪ್ರಾಹಸದ್ ಭಗವತಾ ಕ್ಷಿತಿಭಾರನಾಶಹೇತೋಃ ಸುಸೂಚಿತ ಊರುಸ್ವರತೋSತ್ರ ಭೀಮಃ ।

ಪಾಞ್ಚಾಲರಾಜಸುತಯಾ ಚ ಸಮಂ ತಥಾSನ್ಯೈಃ ಸ್ವೀಯೈಸ್ತಥಾSನು ಜಹಸುರ್ಭಗವನ್ಮಹಿಷ್ಯಃ ॥೨೧.೨೮೨॥

ಭೂಭಾರನಾಶವಾಗಲಿ ಎನ್ನುವ ಉದ್ದೇಶ,

ಶ್ರೀಕೃಷ್ಣ ಕೊಟ್ಟ ಕಣ್ಸನ್ನೆಯಿಂದ ಸಂದೇಶ.

ಜೋರಾಗಿ ನಕ್ಕ ಭೀಮನ ಅನುಸರಿಸಿದರು ದ್ರೌಪದಿ ಸಾತ್ಯಕಿಯರು,

ಭೀಮಸೇನಾದಿಗಳ ಅನುಸರಿಸಿ ಕೃಷ್ಣಪತ್ನಿಯರೂ ನಕ್ಕುಬಿಟ್ಟರು.

 

ಮನ್ದಸ್ಮಿತೇನ ವಿಲಸದ್ವದನೇನ್ದುಬಿಮ್ಬೋ ನಾರಾಯಣಸ್ತು ಮುಖಮೀಕ್ಷ್ಯ ಮರುತ್ಸುತಸ್ಯ ।

ನೋವಾಚ ಕಿಞ್ಚಿದಥ ಧರ್ಮ್ಮಸುತೋ ನಿವಾರ್ಯ್ಯ ಪ್ರಾಸ್ಥಾಪಯದ್ ವಸನಮಾಲ್ಯವಿಲೇಪನಾನಿ ॥೨೧.೨೮೩॥

ಹೊಳೆವ ಚಂದ್ರನಂಥಾ ಮುಖವುಳ್ಳ ಮುಗುಳು ನಗೆಯ ನಾರಾಯಣ,

ಏನನ್ನೂ ಹೇಳದೇ ಸುಮ್ಮನೇ ನೋಡಿದನೊಮ್ಮೆ ಭೀಮಸೇನನ ಮುಖವನ್ನ.

ಧರ್ಮರಾಜ ಆಗ ಉಳಿದ ಎಲ್ಲರೂ ನಗುವುದನ್ನು ತಡೆದ,

ದುರ್ಯೋಧನಗಾಗಿ ಬಟ್ಟೆ ಹೂಮಾಲೆ ಗಂಧವನ್ನು ಕಳುಹಿಸಿದ.

 

ಕೃಷ್ಣಾವೃಕೋದರಗತಂ ಬಹಳಂ ನಿಧಾಯ ಕ್ರೋಧಂ ಯಯೌ ಸಶಕುನಿರ್ದ್ಧೃತರಾಷ್ಟ್ರಪುತ್ರಃ ।

ಸಮ್ಬ್ರೀಳಿತೋ ನೃಪತಿದತ್ತವರಾಮ್ಬರಾದೀನ್  ನ್ಯಕ್ಕೃತ್ಯ ಮಾರ್ಗ್ಗಗತ ಆಹ ಸ ಮಾತುಲಂ ಸ್ವಮ್ ॥೨೧.೨೮೪॥

ಅತ್ಯಂತ ನಾಚಿಕೆಗೆ ಒಳಗಾಗಿ ಹೋದ ದುರ್ಯೋಧನ,

ದ್ರೌಪದಿ ಭೀಮರ ಮೇಲಿನ ಸಿಟ್ಟಿಂದ ಕುದಿಯುತ್ತಿತ್ತು ಮನ.

ಧರ್ಮರಾಜ ಕೊಟ್ಟ ವಸ್ತ್ರಗಳನ್ನು ತಿರಸ್ಕಾರ ಮಾಡಿದ,

ಶಕುನಿ, ತಮ್ಮಂದಿರೊಡಗೂಡಿ ಹಸ್ತಿನಾವತಿಯತ್ತ ನಡೆದ.

ದಾರಿಯಲ್ಲಿ ಮಾವ ಶಕುನಿಯೊಡನೆ ಮಾತಾಡುತ್ತ ಹೇಳಿದ.

 

ಯೌ ಮಾಮಹಸತಾಂ ಕೃಷ್ಣಾಭೀಮೌ ಕೃಷ್ಣಸ್ಯ ಸನ್ನಿಧೌ ।

ತಯೋರಕೃತ್ವಾ ಸನ್ತಾಪಂ ನಾಹಂ ಜೀವಿತುಮುತ್ಸಹೇ             ॥೨೧.೨೮೫॥

ಯಾವ ದ್ರೌಪದಿ ಭೀಮರಿಂದ ಕೃಷ್ಣನೆದುರಲ್ಲಿ ಆಯಿತೋ ಅವಮಾನ,

ಅವರಿಗೆ ಕೇಡನ್ನು ಉಣಿಸದೇ ಬದುಕಿರಲಾರೆ ಎಂದ ದುರ್ಯೋಧನ.

 

ಯದಿ ಮೇ ಶಕ್ತಿರತ್ರ ಸ್ಯಾದ್ ಘಾತಯೇಯಂ ವೃಕೋದರಮ್ ।

ಅಗ್ರಪೂಜಾಂ ಚ ಕೃಷ್ಣಸ್ಯ ವಿಲುಮ್ಪೇಯಂ ನ ಸಂಶಯಃ              ॥೨೧.೨೮೬॥

ಅವಮಾನಿತ ದುರ್ಯೋಧನನಿಂದ ಕೋಪ ಅಸಹಾಯಕತೆಗಳ ಪ್ರಲಾಪ,

ಶಕ್ತನಾಗಿದ್ದರೆ ಭೀಮನ ಕೊಂದು ಕೃಷ್ಣಪೂಜೆ ತಡೆಯುತ್ತಿದ್ದೆನೆಂಬ ಪ್ರತಾಪ.

ಇದರಲ್ಲಿ ಸಂಶಯವಿಲ್ಲೆಂಬ ಅವನ ಮಾತಲ್ಲಿದ್ದುದು ಅಶಕ್ತತೆಯದೇ ಲೇಪ.

 

ಈದೃಶಂ ಪಾಣ್ಡವೈಶ್ವರ್ಯಂ ದೃಷ್ಟ್ವಾ ಕೋ ನಾಮ ಜೀವಿತಮ್ ।

ಇಚ್ಛೇತ ಕರದಾ ಯೇಷಾಂ ವೈಶ್ಯವತ್ ಸರ್ವಭೂಮಿಪಾಃ                       ॥೨೧.೨೮೭॥ 

ಪಾಂಡವರಿಗೆ ಎಲ್ಲಾ ರಾಜರೂ ವೈಶ್ಯರಂತೆ ನಮ್ರರಾಗಿ ಕಪ್ಪ ಕೊಡುತ್ತಿದ್ದಾರೆ,

ಹೀಗಿರುವಾಗ ಪಾಂಡವರ ವೈಭವ ಸಹಿಸುತ್ತಾ ಯಾರು ಬದುಕಬಯಸುತ್ತಾರೆ.

 

ಇತ್ಯುಕ್ತಃ ಶಕುನಿರ್ವೈರಂ ದೃಢೀಕರ್ತ್ತುಂ ವಚೋSಬ್ರವೀತ್ ।

ಕಿಂ ತೇ ವೈರೇಣ ರಾಜೇನ್ದ್ರ ಬಲಿಭಿರ್ಭ್ರಾತೃಭಿಃ ಪುನಃ                 ॥೨೧.೨೮೮॥

 

ಅನುಜೀವಸ್ವ ತಾನ್ ವೀರಾನ್ ಗುಣಜ್ಯೇಷ್ಠಾನ್ ಬಲಾಧಿಕಾನ್ । 

ಇತೀರಿತೋSತಿಸಂವೃದ್ಧಕೋಪ ಆಹ ಸುಯೋಧನಃ           ॥೨೧.೨೮೯॥

ಇದನ್ನೆಲ್ಲಾ ಕೇಳಿಸಿಕೊಂಡ ಶಕುನಿಯಲ್ಲಿದ್ದದ್ದು ವೈರತ್ವವನ್ನು ಬೆಳೆಸುವ ಕುಯುಕ್ತಿ,

ಮಹರಾಜಾ, ಬಲಿಷ್ಠ ಅಣ್ಣತಮ್ಮಂದಿರಲ್ಲಿ ವೈರವೇಕೆ; ಅನುಸರಿಸಿಕೊಳ್ಳುವುದೇ ಯುಕ್ತಿ.

ಕೇಳಿದ ದುರ್ಯೋಧನ ಹೇಳುವ ; ಕೋಪ ಅವಮಾನದಿಂದ ಬೆಂದಿತ್ತವನ ಮತಿ.

 

ಯದಿ ತೇಷಾಂ ತದೈಶ್ವರ್ಯಂ ನ ಮಾಂ ಗಚ್ಛೇದಶೇಷತಃ ।

ಸರ್ವಥಾ ನೈವ ಜೀವೇಯಮಿತಿ ಸತ್ಯಂ ಬ್ರವೀಮಿ ತೇ               ॥೨೧.೨೯೦॥

ಪಾಂಡವರ ಆ ಸಂಪತ್ತು ನನಗೆ ಬರದಿರಲು,

ಕಾರಣವೇ ಇರುವುದಿಲ್ಲ ನಾನು ಬದುಕಿರಲು,

ಪರಮ ಸತ್ಯ ಮಾತಿದು-ಅಲ್ಲ ಜೊಳ್ಳು ಪೊಳ್ಳು.

 

ನಚ ಬಾಹುಬಲಾಚ್ಛಕ್ಷ್ಯ ಆದಾತುಂ ತಾಂ ಶ್ರಿಯಂ ಕ್ವಚಿತ್ ।

ನೇನ್ದ್ರೋSಪಿ ಸಮರೇ ಶಕ್ತಸ್ತಾನ್ ಜೇತುಂ ಕಿಮು ಮಾನುಷಾಃ               ॥೨೧.೨೯೧॥

ಆದರೆ ನನ್ನ ತೋಳ್ಬಲದಿಂದ ಗೆಲ್ಲಲಾರೆ ಆ ಸಂಪತ್ತು,

ಇಂದ್ರನಿಗೂ ಇಲ್ಲ ಅವರನ್ನು ಗೆಲ್ಲುವಂಥಾ ತಾಕತ್ತು.

ಇನ್ನು ಮನುಷ್ಯ ಮಾತ್ರರಿಗೆಲ್ಲಿ ಬರಬೇಕು ಆ ಗೈರತ್ತು.


][Contributed by Shri Govind Magal]

No comments:

Post a Comment

ಗೋ-ಕುಲ Go-Kula