Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 239-244

ಶ್ರುತ್ವೈವ  ತದ್ ವೃಷ್ಣಯಃ ಸರ್ವ ಏವ ಸಮುದ್ಯಮಂ ಚಕ್ರಿರೇ ಕೌರವೇಷು ।

ನಿವಾರ್ಯ್ಯ ತಾನ್ ಬಲಭದ್ರಃ ಸ್ವಯಂ ಯಯೌ ಸಹೋದ್ಧವಃ ಕೌರವೇಯಾಞ್ಛಮಾರ್ತ್ಥೀ ॥೨೨.೨೩೯॥

ದುರ್ಯೋಧನಾದಿಗಳು ಸಾಂಬನನ್ನು ಬಂಧಿಸಿರುವ ಸುದ್ದಿ,

ಕೊಟ್ಟಿತು ಯಾದವರಿಗೆ ಕೌರವರನ್ನು ನಾಶಪಡಿಸುವ ಬುದ್ಧಿ.

ಅವರೆಲ್ಲರನ್ನೂ ತಡೆದರು ಬಲರಾಮ ದೇವರು,

ಉದ್ಧವನ ಜೊತೆಗೂಡಿ ಕೌರವರತ್ತ ಹೊರಟರು.

 

ಪುರಸ್ಯ ಬಾಹ್ವೋಪವನೇ ಸ್ಥಿತಃ ಸ ಪ್ರಾಸ್ಥಾಪಯಚ್ಚೋದ್ಧವಂ ಕೌರವಾರ್ತ್ಥೇ ।

ಆಗತ್ಯ ಸರ್ವೇ ಕುರವೋSಸ್ಯ ಪೂಜಾಂ ಚಕ್ರುಃ ಸ ಚಾSಹೋಗ್ರಸೇನಸ್ಯ ಚಾSಜ್ಞಾಮ್             ॥೨೨.೨೪೦॥

ಬಲರಾಮ ನಿಂತದ್ದು ಹಸ್ತಿನಪುರದ ಹೊರಗಿರುವ ಒಂದು ಉದ್ಯಾನ,

ಕೌರವರ ಬಳಿಗೆ ಕಳುಹಿಸಿದ ಮಾತುಕತೆಗೆ ಜೊತೆ ಬಂದಿದ್ದ ಉದ್ಧವನನ್ನ.

ಆಗ ಎಲ್ಲಾ ಕೌರವರೂ ಬಂದು ಬಲರಾಮಗೆ ಮಾಡುತ್ತಾರೆ ಸತ್ಕಾರ,

ಬಲರಾಮ ಅವರಿಗೆ ಹೇಳುತ್ತಾನೆ ಉಗ್ರಸೇನ ಕೊಟ್ಟ ಆಜ್ಞೆಯ ಸಾರ.

 

ಆಜ್ಞಾಪಯದ್ ವೋ ನೃಪತಿಃ ಸ್ಮ ಯನ್ನಃ ಕುಮಾರಕಃ ಪ್ರಗೃಹೀತೋ ಭವದ್ಭಿಃ ।

ಏಕಃ ಸಮೇತೈರ್ಬಹುಭಿರ್ಬಾನ್ಧವಾರ್ತ್ಥಂ ಕ್ಷಾನ್ತಂ ತನ್ನೋ ಮುಞ್ಚತಾSಶ್ವೇವ ಸಾಮ್ಬಮ್ ॥೨೨.೨೪೧॥

ನಿಮಗೊಂದು ಆಜ್ಞೆ ಮಾಡಿದ್ದಾನೆ ನಮ್ಮ ರಾಜ ಉಗ್ರಸೇನ,

ಅಧರ್ಮದಿ ಬಂಧಿಸಿರುವಿರಿ ನೀವು ನಮ್ಮ ಒಂಟಿ ಹುಡುಗನನ್ನ.

ಬಂಧುತ್ವ ನಾಶವಾಗದಿರಲಿ ಎಂಬುದು ನಮ್ಮ ಉದ್ದೇಶ,

ಹೀಗಾಗಿ ಸಾಂಬನ ಬಿಟ್ಟುಬಿಡಿ ಎಂದು ನಮ್ಮ ರಾಜಾದೇಶ.

 

ಆಜ್ಞಾಪಯಾಮಾಸ ವ ಉಗ್ರಸೇನ ಇತ್ಯುಕ್ತಮೇವ ತು ನಿಶಮ್ಯ ಕುರುಪ್ರವೀರಾಃ ।

ಸಂಶ್ರಾವ್ಯ ದುಷ್ಟವಚನಾನಿ ಬಲಂ ಪುರಂ ಸ್ವಂ ಕ್ರೋಧಾತ್ ಸಮಾವಿವಿಶುರತ್ರ ಚುಕೋಪ ರಾಮಃ ॥೨೨.೨೪೨॥

ಉಗ್ರಸೇನ ಆಜ್ಞೆ ಮಾಡಿದ್ದಾನೆಂಬ ಬಲರಾಮನ ಮಾತು,

ದುರ್ಯೋಧನಾದಿಗಳಲ್ಲಿ ಕೋಪದ ಕಿಡಿಯ ಹೊತ್ತಿಸಿತು.

ಅವರೆಲ್ಲಾ ಬಲರಾಮನನ್ನು ಬೈಯ್ದರು ಅವಾಚ್ಯ ಬೈಯ್ಗುಳಗಳಿಂದ,

ಕೆಟ್ಟ ನಡೆಯಿಂದ ವಾಪಸಾದವರ ಮೇಲೆ ಬಲರಾಮ ಕೋಪಗೊಂಡ.

 

ಸ ಲಾಙ್ಗಲೇನ ತತ್ ಪುರಂ ವಿಕೃಷ್ಯ ಜಾಹ್ನವೀಜಲೇ ।

ನಿಪಾತಯನ್ ನಿವಾರಿತಃ ಪ್ರಣಮ್ಯ ಸರ್ವಕೌರವೈಃ       ॥೨೨.೨೪೩॥

ಆಗ ಬಲರಾಮನಲ್ಲಿ ಪ್ರಜ್ವಲಿಸಿ ಎದ್ದುಕೂತಿತು ಅಗಾಧವಾದ ಕೋಪ,

ಅನುವಾದ:ಹಸ್ತಿನವತಿಯ ಎಳೆದು ಗಂಗೆಯಲಿ ಮುಳುಗಿಸುವ ಪ್ರತಾಪ.

ಬೆದರಿದ ಕೌರವರಿಂದ ಬಲರಾಮಗೆ ನಮನ,

ಹೀಗಾಯಿತು ಬಲರಾಮನ ಕೋಪಕ್ಕೆ ಶಮನ.

 

ಸಭಾರ್ಯ್ಯಮಾಶು ಪುತ್ರಕಂ ಸುಯೋಧನಾಭಿಪೂಜಿತಮ್ ।

ಸಪಾರಿಬರ್ಹಮಾಪ್ಯ ಚ ಪ್ರಜಗ್ಮಿವಾನ್ ಸ್ವಕಾಂ ಪುರಮ್             ॥೨೨.೨೪೪॥

ಬಲರಾಮನಿಗೆ ದುರ್ಯೋಧನಾದಿಗಳಿಂದ ವಿಶೇಷ ಸತ್ಕಾರ,

ಪತ್ನೀಸಮೇತನಾದ ಸಾಂಬನನ್ನು ಮರು ಒಪ್ಪಿಸುವ ವ್ಯಾಪಾರ.

ಸಾಂಬನ ಹಿಂತಿರುಗಿಸಿದರು ಗೌರವ ಮದುವೆ ಬಳುವಳಿಗಳೊಂದಿಗೆ,

ತೃಪ್ತನಾದ ಬಲರಾಮ ಹೊರಟ ದ್ವಾರಕೆಗೆ ಮಗ ಸೊಸೆಯರೊಂದಿಗೆ. 

No comments:

Post a Comment

ಗೋ-ಕುಲ Go-Kula