Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 344-350

 

ಸ ಶಚೀಪ್ರತಿಷೇಧಾರ್ತ್ಥಮಗಸ್ತ್ಯೇನ ಮಹಾತ್ಮನಾ ।

ವೇದಪ್ರಾಮಾಣ್ಯವಿಷಯೇ ಪೃಷ್ಟೋ ನೇತ್ಯಾಹ ಮೂಢಧೀಃ ।

ಪ್ರಮಾಣಮಿತಿ ತೇನೋಕ್ತಃ ಶಿರಸ್ಯೇನಂ ಪದಾSಹನತ್ ॥೨೨.೩೪೪॥

 

ಶಚಿಯನ್ನು ಬಯಸುತ್ತಿದ್ದ ನಹುಷಗೆ ಮಾಡಬೇಕಿತ್ತು ಪ್ರತಿನಿಷೇಧ,

ಅಗಸ್ತ್ಯರು ನಹುಷನ ಕೇಳುತ್ತಾರೆ -ಪ್ರಮಾಣ ಹೌದೋ ಅಲ್ಲವೋ ವೇದ.

ಮೋಹಿತನಾದ ನಹುಷ ವೇದ ಪ್ರಮಾಣ ಅಲ್ಲವೆಂದ,

ಅಗಸ್ತ್ಯರು ಪ್ರಮಾಣವೆಂದಾಗ ಅವರ ತಲೆಗೆ ಒದ್ದ.

 

ತದಾ ಭೃಗುಂ ತಸ್ಯ ಜಟಾಸು ಲೀನಂ ಕದಾSಪಿ ತಸ್ಯಾಕ್ಷಿಪಥಂ ನ ಯಾತಮ್ ।

ಆವಿಶ್ಯ ಕಞ್ಜಪ್ರಭವಃ ಶಶಾಪ ವ್ರಜಾSಶು ಪಾಪಾಜಗರತ್ವಮೇವ ॥೨೨.೩೪೫॥

 

ನಹುಷಗೆ ಕಾಣದಂತೆ ಅಗಸ್ತ್ಯರ ಜಟೆಯಲ್ಲಿ

ಭೃಗುಮುನಿ ಕುಳಿತಿದ್ದ ವ್ಯಾಪಾರ,

ಅವರಲ್ಲಿ ಬ್ರಹ್ಮ ಪ್ರವೇಶಿಸಿ ಶಪಿಸಿದ ಪಾಪಿ ನಹುಷಾ ನೀ ಹೊಂದು ಉರಗಶರೀರ.

 

[ಬ್ರಹ್ಮದೇವರು ಯಾವ ಶಾಪ ನೀಡಿದರು ಎನ್ನುವುದನ್ನು ವಿವರಿಸುತ್ತಾರೆ:]

 

ಷಷ್ಠೇ ಕಾಲೇ ಯಸ್ತ್ವಯಾSಸಾದಿತಃ ಸ್ಯಾತ್ ಸ ತೇ ವಶಂ ಯಾತು ಬಲಾಧಿಕೋSಪಿ ।

ಯದಾ ಗೃಹೀತಂ ಪುರುಷಂ ನಿಹನ್ತುಂ ನ ಶಕ್ಷ್ಯಸೇ ಯದಿ ಸ ತ್ವದ್ಗೃಹೀತಃ ।

ಶಕ್ತೋSಪಿ ನಾSತ್ಮಾನಮಭಿಪ್ರಮೋಚಯೇತ್ ತದಾSಸ್ಯ ಸ್ಯಾತ್ ತ್ವತ್ತಪೋSಗ್ರ್ಯಂ ಬಲಂ ಚ ॥೨೨.೩೪೬॥

 

ನೀನು ಅಜಗರನಾಗಿ ಕೆಳಕ್ಕೆ ಬೀಳುತ್ತೀಯಾ,

ಮೂರುದಿನ ಊಟವಿರದೇ ಇರುತ್ತೀಯಾ.

ನಿನಗೆ ಸಂಧಿಸುವ ವ್ಯಕ್ತಿಯೊಬ್ಬ ಆಗಿರುತ್ತಾನೆ ನಿನಗಿಂತ ಬಲವಂತ,

ನಿನಗವನು ವಶನಾದರೂ ಕೂಡಾ ನೀನವನ ಕೊಲ್ಲಲಾಗಲ್ಲ ಸಮರ್ಥ.

ನಿನ್ನ ವಶನಾದ ಅವನು ಶಕ್ತನಾಗಿದ್ದರೂ ನಿನ್ನಿಂದ ಬಿಡಿಸಿಕೊಳ್ಳುವುದಿಲ್ಲ,

ಆಗ ವರ್ಗಾವಣೆ ಆಗುವುದು ಅವನಿಗೆ ನಿನ್ನೆಲ್ಲಾ ತಪಸ್ಸು ಮತ್ತು ಬಲ.

 

ಸರ್ವದೇವಮುನೀನಾಂ ಯತ್ ತಪಸ್ತ್ವಾಂ ಸಮುಪಾಶ್ರಿತಮ್ ।

ತಚ್ಚ ಸರ್ವಂ ತಮೇವೈತಿ ನಾತ್ರ ಕಾರ್ಯ್ಯಾ ವಿಚಾರಣಾ            ॥೨೨.೩೪೭॥

 

ಯಾವ ದೇವತೆಗಳ ಮುನಿಗಳ ತಪಸ್ಸು ನಿನ್ನನ್ನು ಆಶ್ರಯಿಸಿಕೊಂಡಿದೆ,

ಅದೆಲ್ಲವೂ ಕೂಡಾ ಅವನಿಗೇ ಹೋಗಿ ಸೇರುವ ವ್ಯವಸ್ಥೆಯಾಗಿದೆ.

ಈ ವಿಷಯದಲ್ಲಿ ಕೂಡದು ಯಾವುದೇ ವಿಚಾರಣೆ ಅಥವಾ ತಗಾದೆ.

 

ಯದಾ ಪ್ರಶ್ನಾಂಸ್ತ್ವದೀಯಾಂಶ್ಚ ಕಶ್ಚಿತ್ ಪರಿಹರಿಷ್ಯತಿ ।

ತದಾ ಗನ್ತಾSಸಿ ಚ ದಿವಂ ವಿಸೃಜ್ಯಾSಜಗರಂ ತನುಮ್  ॥೨೨.೩೪೮॥

 

ಯಾವಾಗ ನಿನ್ನೆಲ್ಲಾ ಪ್ರಶ್ನೆಗಳಿಗೆ ಆ ಒಬ್ಬ ಕೊಡುತ್ತಾನೋ ಪರಿಹಾರ,

ನೀನಾಗ ಸ್ವರ್ಗವನ್ನು ಸೇರುವೆ ತ್ಯಜಿಸಿ ನಿನ್ನ ಈ ಹೆಬ್ಬಾವಿನ ಶರೀರ.

 

ಸ್ಮೃತಿಶ್ಚ ಮತ್ಪ್ರಸಾದೇನ ಸರ್ವದಾ ತೇ ಭವಿಷ್ಯತಿ ।

ಭೃಗುದೇಹಗತೇನೈವಂ ಶಪ್ತಃ ಕಮಲಯೋನಿನಾ ॥೨೨.೩೪೯॥

 

ಪಪಾತಾಜಗರೋ ಭೂತ್ವಾ ನಹುಷಃ ಕ್ಷಣಮಾತ್ರತಃ ।

ಇನ್ದ್ರೋSಪ್ಯವಾಪ ಸ್ವಂ ಸ್ಥಾನಮಿಷ್ಟ್ವಾ ವಿಷ್ಣುಂ ವಿಪಾಪಕಃ ॥೨೨.೩೫೦॥

 

ಬ್ರಹ್ಮದೇವ ಹೇಳುತ್ತಾನೆ -ನನ್ನ ಅನುಗ್ರಹದಿಂದ ನಿನಗ್ಯಾವಾಗಲೂ ಇರುತ್ತದೆ ಪೂರ್ವಜನ್ಮ ಸ್ಮೃತಿ,

ಹೀಗೆ ಭೃಗುದೇಹದಲ್ಲಿದ್ದ ಬ್ರಹ್ಮ ಶಪಿಸಿದಾಗ ನಹುಷಗೊದಗಿತು ಹೆಬ್ಬಾವಾಗಿ ಕೆಳಗೆ ಬಿದ್ದ ಗತಿ.

ಅದೇ ಸಮಯದಲ್ಲಿ ಇಂದ್ರ ತನ್ನ ಪಾಪವನ್ನು ಕಳೆದುಕೊಂಡ,

ಅಶ್ವಮೇಧದಿಂದ ವಿಷ್ಣುವ ಹೋಮಿಸಿ ತನ್ನ ಸ್ವರ್ಗ ಸೇರಿಕೊಂಡ.

No comments:

Post a Comment

ಗೋ-ಕುಲ Go-Kula