Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 251-260

ಗೂಢಂ ಕನ್ಯಾಗೃಹೇ ತಂ ತು ಜ್ಞಾತ್ವಾ ಕನ್ಯಾಭಿರಕ್ಷಿಣಃ ।

ಊಚುರ್ಬಾಣಯಾದಿಶಚ್ಚ ಕಿಙ್ಕರಾನ್ ಗ್ರಹಣೇSಸ್ಯ ಸಃ ॥೨೨.೨೫೧॥

ಅನಿರುದ್ಧ ಅವಿತುಕೊಂಡಿದ್ದ ಅಂತಃಪುರದ ಒಳಗೆ,

ಅಂತಃಪುರದ ಕಾವಲುಗಾರರಿಂದ ತಿಳಿಯಿತು ಬಾಣನಿಗೆ.

ಅನಿರುದ್ಧನನ್ನು ಬಂಧಿಸಲು ಆಜ್ಞೆ ಇತ್ತ ಬಾಣ ಭೃತ್ಯರಿಗೆ.

 

ಆಗತಾನನಿರುದ್ಧಸ್ತಾನ್ ಪರಿಘೇಣ ಮಹಾಬಲಃ ।

ನಿಹತ್ಯ ದ್ರಾವಯಾಮಾಸ ಸ್ವಯಮಾಯಾತ್ ತತೋSಸುರಃ             ॥೨೨.೨೫೨॥

ಹಿಡಿಯಲು ಬಂದ ಭೃತ್ಯರನ್ನು ಬಲಶಾಲಿ ಅನಿರುದ್ಧ,

ಬಾಗಿಲ ಚಿಲಕದಿಂದ ಕೊಂದ ; ಉಳಿದವರ ಓಡಿಸಿದ.

ಆಗ ಸ್ವಯಂ ಬಾಣಾಸುರನೇ ಅವನೆದುರಿಸಲು ಬಂದ.

 

ಸ ತು ಯುಧ್ವಾSತಿಕೃಚ್ಛ್ರೇಣ ನಾಗಾಸ್ತ್ರೇಣ ಬಬನ್ಧ ತಮ್ ।

ಅಥ ಕೃಷ್ಣಃ ಸಮಾರುಹ್ಯ ಗರುಡಂ ರಾಮಸಂಯುತಃ             ॥೨೨.೨೫೩॥

 

ಪ್ರದ್ಯುಮ್ನೇನ ಚ ತತ್ರಾಗಾತ್ ಪ್ರಥಮಂ ತತ್ರ ವಹ್ನಿಭಿಃ ।

ಯದ್ಧ್ವೈವಾಙ್ಗಿರಸಾ ಚೈವ  ಕ್ಷಣಾದ್ ವಿದ್ರಾಪ್ಯ ತಾನ್ ಹರಿಃ  ॥೨೨.೨೫೪॥

 

ವಿದ್ರಾಪ್ಯ ಸರ್ವಪ್ರಮಥಾನಾಸಸಾದ್ ಜ್ವರಂ ತತಃ ।

ತೇನ ಭಸ್ಮಪ್ರಹಾರೇಣ ಜ್ವರಿತಂ ರೋಹಿಣೀಸುತಮ್ ॥೨೨.೨೫೫॥

ಅನಿರುದ್ಧನೊಡನೆ ಬಹುವಾಗಿ ಸೆಣಸಾಡಿದ ಬಾಣ,

ಬಹುಕಷ್ಟದಿಂದ ಮಾಡಿದ ಸರ್ಪಾಸ್ತ್ರದಿಂದವನ ಬಂಧನ.

ಹೀಗೆ ಅನಿರುದ್ಧ ಬಾಣಾಸುರಗೆ ಸೆರೆಯಾದ,

ಕೃಷ್ಣಾದಿಗಳಿಗೆ ವಿಷಯ ತಿಳಿಯಿತು ನಾರದರಿಂದ.

ಶ್ರೀಕೃಷ್ಣ ಗರುಡನನ್ನೇರಿ ಬಲರಾಮ ಪ್ರದ್ಯುಮ್ನರೊಂದಿಗೆ,

ಬಂದವನಾದ ಬಾಣ ಪಟ್ಟಣ ಶೋಣಿತಪುರದ ಬಳಿಗೆ.

ನಗರ ಪ್ರವೇಶಕ್ಕೆ ಮುನ್ನ ಶುಚಿ, ಪಾವಕ ಮತ್ತು ಪವಮಾನ,

ಎಂಬ ಮೂರು ಅಗ್ನಿರೂಪಗಳೊಂದಿಗೆ ಯುದ್ಧ ಮಾಡಿದ ಕೃಷ್ಣ.

ರುದ್ರನ ಮುಖ್ಯಭೃತ್ಯ ಅಂಗಿರಸನೊಡನೆಯೂ ಯುದ್ಧ ಮಾಡಿದ,

ಕ್ಷಣದಿ ಎಲ್ಲರ ಸೋಲಿಸಿ ಓಡಿಸಿ, ಜ್ವರದಭಿಮಾನಿಗೆ ಎದುರಾದ,

ಜ್ವರನ ಭಸ್ಮ ಪ್ರಹಾರದಿಂದ ಬಲರಾಮ ತಾನು ಜ್ವರಪೀಡಿತನಾದ.

 

ಆಶ್ಲಿಷ್ಯ ವಿಜ್ವರಂ ಚಕ್ರೇ ವಾಸುದೇವೋ ಜಗತ್ಪ್ರಭುಃ ।

ಸ್ವಯಂ ವಿಕ್ರೀಡ್ಯ ತೇನಾಥ ಕಞ್ಚಿತ್ ಕಾಲಂ ಜನಾರ್ದ್ದನಃ             ॥೨೨.೨೫೬॥

 

ನಿಷ್ಪಿಷ್ಯ ಮುಷ್ಟಿಭಿಶ್ಚಾನ್ಯಂ ಸಸರ್ಜ್ಜ ಜ್ವರಮಚ್ಯುತಃ ।

ಸ್ವಯಂ ಜಿತ್ವಾSಪಿ ಗಿರಿಶಭೃತ್ಯಂ ನಾಲಮಿತಿ ಪ್ರಭುಃ                  ॥೨೨.೨೫೭॥

 

ಸ್ವಭೃತ್ಯೇನೈವ ಜೇತವ್ಯ ಇತ್ಯನ್ಯಂ ಸಸೃಜೇ ತದಾ ।

ಜ್ವರೇಣ ವೈಷ್ಣವೇನಾಸೌ ಸುಭೃಶಂ ಪೀಡಿತಸ್ತದಾ                     ॥೨೨.೨೫೮॥

ಜ್ವರಪೀಡಿತ ಬಲರಾಮನಿಗಿತ್ತ ಕೃಷ್ಣ ಆಲಿಂಗನ,

ಬಲರಾಮನಿಗೆ ಕೊಟ್ಟ ಜ್ವರದಿಂದ ವಿಮೋಚನ.

ಜ್ವರಾಭಿಮಾನಿ ರುದ್ರಭೃತ್ಯ ಶೈವಜ್ವರನೊಂದಿಗೆ ಕೃಷ್ಣ ಮಾಡಿದ ಕೆಲಕಾಲ ಯುದ್ಧ,

ಅವನಿಗೊಂದು ಮುಷ್ಠಿಪ್ರಹಾರ ಕೊಟ್ಟು, ಅವನ ನಾಶಕ್ಕೆ ಇನ್ನೊಬ್ಬ ಜ್ವರನ ಮಾಡಿದ ಸಿದ್ಧ.

ರುದ್ರಭೃತ್ಯ ಜ್ವರನನ್ನೂ ಕೃಷ್ಣ ತಾ ಗೆದ್ದಿದ್ದ,

ತನ್ನ ಭ್ರತ್ಯನಿಂದ ಸೋಲಲೆಂದವನ ಸೃಷ್ಟಿಸಿದ.

ಶ್ರೀಕೃಷ್ಣ ಸೃಷ್ಟಿ ಮಾಡಿದ ಜ್ವರದಿಂದ,

ಶೈವಜ್ವರನು ಅತಿಯಾಗಿ ಪೀಡಿತನಾದ.

 

ಗ್ರಾಸಾರ್ತ್ಥಮುಪನೀತಶ್ಚ ಜಗಾಮ ಶರಣಂ ಹರಿಮ್ ।

ತೇನ ಸ್ತುತಃ ಸ ಭಗವಾನ್ ಮೋಚಯಾಮಾಸ ತಂ ವಿಭುಃ             ॥೨೨.೨೫೯॥

ಶ್ರೀಕೃಷ್ಣನಿಂದ ಸೃಷ್ಟಿಸಲ್ಪಟ್ಟ ಆ ಜ್ವರ,

ಮಾಡಿಕೊಂಡಾಗ ಶೈವಜ್ವರನ ಆಹಾರ,

ಶೈವಜ್ವರನಾಗ ಕೃಷ್ಣನಲ್ಲಿ ಶರಣಾಗಿ ಬೇಡಿದ,

ಸ್ತುತಿಸಲ್ಪಟ್ಟ ಕೃಷ್ಣ ಅವನ ಬಿಡುಗಡೆ ಮಾಡಿದ.

 

ಕ್ರೀಡಾರ್ತ್ಥಮತ್ಯಲ್ಪಜನೇಷ್ವಪಿ ಪ್ರಭುಃ ಕಥಞ್ಚಿದೇವ ವ್ಯಜಯದ್ ವ್ಯಥಾಂ ವಿನಾ ।

ಇತ್ಯಾದಿ ಮೋಹಾಯ ಸ ದರ್ಶಯತ್ಯಜೋ ನಿತ್ಯಸ್ವತನ್ತ್ರಸ್ಯ ಕುತೋ ವ್ಯತಾದಯಃ ॥೨೨.೨೬೦॥

ಸರ್ವಶಕ್ತ ಸರ್ವಸ್ವತಂತ್ರ ಪರಮಾತ್ಮಗ್ಯಾವ ಬಳಲಿಕೆ,

ಲೋಕಮೋಹನಕ್ಕಾಗಿ ಸಾಮಾನ್ಯರಂತವನ ತೋರಿಕೆ.

ಸರ್ವಸ್ವತಂತ್ರನಾದ ಭಗವಂತನಿಗ್ಯಾವ ವ್ಯಥೆ,

ದುರ್ಜನಮೋಹಕ್ಕೆ ತೋರುತ್ತಾನೆ ಬಳಲಿದವನಂತೆ. 

No comments:

Post a Comment

ಗೋ-ಕುಲ Go-Kula