Saturday, 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 288-293

 

ತಯಾSರ್ತ್ಥಿತಃ ಸಗದಸ್ತುಙ್ಗಮೇನಂ ಗಿರಿಂ ವೇಗಾದಾರುಹದ್ ವಾಯುಸೂನುಃ।

ಪ್ರಶಸ್ಯಮಾನಃ ಸುರಸಿದ್ಧಸಙ್ಘೈಃ ಮೃದ್ನನ್ ದೈತ್ಯಾನ್ ಸಿಂಹಶಾರ್ದ್ದೂಲರೂಪಾನ್ ॥೨೨.೨೮೮॥

ಹೀಗೆ ತಾವರೆಗಾಗಿ ದ್ರೌಪದೀದೇವಿಯಿಂದ ಬೇಡಿಕೆ ಬಂದಾಗ,

ಭೀಮಸೇನ ಎತ್ತರದ ಬೆಟ್ಟವನ್ನು ಬಲು ವೇಗದಿಂದ ಏರಿದನಾಗ.

ದೇವತೆಗಳಿಂದಲೂ ಸಿದ್ಧರಿಂದಲೂ ಭೀಮ ಸ್ತುತಿಸಲ್ಪಟ್ಟವನಾದ,

ಸಿಂಹ ಶಾರ್ದೂಲ ಮುಂತಾದ ವೇಷದ ದೈತ್ಯರ ಹೊಸಕುತ್ತ ಮುನ್ನಡೆದ.

 

ಆಸೇದಿವಾಂಸ್ತತ್ರ ಹನೂಮದಾಖ್ಯಂ ನಿಜಂ ರೂಪಂ ಪ್ರೋದ್ಯದಾದಿತ್ಯಭಾಸಮ್ ।

ಜಾನನ್ನಪ್ಯೇನಂ ಸ್ವೀಯರೂಪಂ ಸ ಭೀಮಶ್ಚಿಕ್ರೀಡ ಏತೇನ ಯಥಾ ಪರೇಣ ॥೨೨.೨೮೯॥

ಆ ಪರ್ವತದಲ್ಲಿ ಹುಟ್ಟುವ ಸೂರ್ಯನಂತೆ ಹೊಳೆಯುತ್ತಿದ್ದ ತನ್ನದೇ ಹನುಮಂತ ರೂಪವನ್ನು ನೋಡಿದ,

ತನ್ನದೇ ರೂಪವೆಂದು ತಿಳಿದರೂ ಬೇರೆಯವರನ್ನು ಮಾತಾಡಿಸಿದಂತೆ ಮಾಡಿದ್ದು ದೇವತಾ ಕ್ರೀಡಾವಿನೋದ.

 

ಧರ್ಮ್ಮೋ ದೇವಾನಾಂ ಪರಮೋ ಮಾನುಷತ್ವೇ ಸ್ವೀಯೇ ರೂಪೇSಪ್ಯನ್ಯವದೇವ ವೃತ್ತಿಃ ।

ಅನಾದಾನಂ ದಿವ್ಯಶಕ್ತೇರ್ವಿಶೇಷಾನ್ನರಸ್ವಭಾವೇ ಸರ್ವದಾ ಚೈವ ವೃತ್ತಿಃ ।

ತಸ್ಮಾದ್ ಭೀಮೋ ಹನುಮಾಂಶ್ಚೈಕ ಏವ ಜ್ಯಾಯಃಕನೀಯೋವೃತ್ತಿಮತ್ರಾಭಿಪೇದೇ ॥೨೨.೨೯೦॥

ಯಾವುದೇ ದೇವತೆಗಳು ಮನುಷ್ಯರಾಗಿ ಅವತಾರ ಮಾಡಿದಾಗ,

ಮನುಷ್ಯರಂತೇ ವರ್ತಿಸುವುದು ಅವರ ಧರ್ಮ ಆಗಿರುತ್ತದೆ ಆಗ.

ಬಳಸುವಂತಿರುವುದಿಲ್ಲ ಅವರು ತಮ್ಮ ದಿವ್ಯಶಕ್ತಿ,

ಸಹಜ ನರಸ್ವಭಾವೇ ಆಗುತ್ತಿರಬೇಕಲ್ಲಿ ಅಭಿವ್ಯಕ್ತಿ.

ಆಗಿದ್ದರೂ ಅವರಿಬ್ಬರೂ ಮೂಲದಲ್ಲಿ ಮುಖ್ಯಪ್ರಾಣ,

ಭೀಮನ ವರ್ತನೆಯಿತ್ತು ;ಹನುಮಂತ ತನ್ನ ದೊಡ್ಡಣ್ಣ.

 

ಸರ್ವೇ ಗುಣಾ ಆವೃತಾ ಮಾನುಷತ್ವೇ ಯುಗಾನುಸಾರಾನ್ಮೂಲರೂಪಾನುಸಾರಾತ್ ।

ಕ್ರಮಾತ್ ಸುರಾಣಾಂ ಭಾಗತೋSವ್ಯಕ್ತರೂಪಾ ಆದಾನತೋ ವ್ಯಕ್ತಿಮಾಯಾನ್ತ್ಯುರೂಣಾಮ್ ॥೨೨.೨೯೧॥

ದೇವತೆಗಳು ಮಾನವರಂತೆ ಭುವಿಗೆ ಬಂದಾಗ ಅವರಿಗಿರುತ್ತದೆ ಯುಗಾನುಸಾರಿಯಾದ ಒಂದು ಆವರಣ,

ಆವೃತವಾಗಿರುವ ಅವರ ಮೂಲ ಜ್ಞಾನ ಬಲ ಗುಣಗಳು ಹೊರಹೊಮ್ಮುವುದಿಲ್ಲ ಆಗುತ್ತಾ ಅನಾವರಣ.

ಹೀಗಾಗಿ ಅವರವರ ಯೋಗ್ಯತಾನುಸಾರವಾದ ಗುಣಗಳಾಗಿರುತ್ತವೆ ಅವ್ಯಕ್ತ,

ಸ್ವರೂಪಗುಣಗಳು ಸ್ವೀಕರಿಸಿದಾಗ ಮಾತ್ರ ವ್ಯಕ್ತ ಇಲ್ಲವಾದರೆ ಅವು ಸುಪ್ತ.

 

ನೈವಾವ್ಯಕ್ತಿಃ ಕಾಚಿದಸ್ತೀಹ ವಿಷ್ಣೋಃ ಪ್ರಾದುರ್ಭಾವೇSಪ್ಯತಿಸುವ್ಯಕ್ತಶಕ್ತೇಃ ।

ಇಚ್ಛಾವ್ಯಕ್ತಿಃ ಪ್ರಾಯಶೋ ಮಾರುತಸ್ಯ ತದನ್ಯೇಷಾಂ ವ್ಯಕ್ತತಾ ಕಾರಣೇನ ॥೨೨.೨೯೨॥

ನಾರಾಯಣನಿಗೆ ಮಾತ್ರ ಮೂಲದಲ್ಲೂ ಅವತಾರದಲ್ಲೂ ಅವನ ಬಲ ಜ್ಞಾನಗಳ ಅಭಿವ್ಯಕ್ತಿ,

ಮುಖ್ಯಪ್ರಾಣದೇವರಿಗೆ ಇರುತ್ತದೆ ಎಲ್ಲಾ ಸಮಯದಲ್ಲೂ ಪಡೆಯಲವರ ಗುಣ ಜ್ಞಾನ ಮತ್ತು ಶಕ್ತಿ.

ಬೇರೆ ದೇವತೆಗಳಿಗೆ ಇದ್ದಾಗ ಒಂದು ಕಾರಣ,

ಆಗಮಾತ್ರ ಅವರ ಗುಣ ಶಕ್ತಿಗಳ ಅನಾವರಣ.

ಎಲ್ಲರನ್ನೂ ಮೀರಿದ ಪರಬ್ರಹ್ಮ ಆ ನಾರಾಯಣ,

ಅವನದು ಎಂದೂ ಎಲ್ಲೂ ಕುಂದದ ಜ್ಞಾನ ತ್ರಾಣ.

 

 

ತಸ್ಮಾದ್ ಭೀಮೋ ಧರ್ಮ್ಮವೃದ್ಧ್ಯರ್ತ್ಥಮೇವ ಸ್ವೀಯೇ ರೂಪೇSಪ್ಯನ್ಯವದ್ ವೃತ್ತಿಮೇವ ।

ಪ್ರದರ್ಶಯಾಮಾಸ ತಥಾSಸುರಾಣಾಂ ಮೋಹಾಯೈವಾಶಕ್ತವಚ್ಛಕ್ತಿರೂಪಃ             ॥೨೨.೨೯೩॥

ಇವೆಲ್ಲಾ ದೈವೀಕಾರಣಗಳಿಂದಾಗಿಯೇ ಜ್ಞಾನಿ ಭೀಮಸೇನದೇವರು,

ಧರ್ಮವೃದ್ಧಿ ನಿಯಮಪಾಲನೆಗೆ ಬೇರೊಬ್ಬರಂತೆ ತೋರಿಕೊಂಡರು.

ಶಕ್ತಿಯಿದ್ದರೂ ಅಶಕ್ತನಂತೆ ತೋರಿದ್ದು ಅಸುರ ಮೋಹನಕ್ಕೆ ಮೊಹರು.

No comments:

Post a Comment

ಗೋ-ಕುಲ Go-Kula