Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 337-343

 

ನೈವ ಶತ್ರೂನನುತ್ಸಾದ್ಯ ನಾನಾದಾಯ ಮಹದ್ ಯಶಃ ।

ನಾಕೃತ್ವಾ ವಾಸುದೇವಾಜ್ಞಾಂ ರಾಜ್ಞಾಂ ಮುಖ್ಯಗತಿರ್ಭವೇತ್ ॥೨೨.೩೩೭॥

 

ತದನ್ಯೇಷಾಂ ತು ವರ್ಣ್ಣಾನಾಂ ಕ್ಷಮಾ ಬಾಹ್ಯೇಷು ಶತ್ರುಷು ।

ಪ್ರಾಯೋ  ಧರ್ಮ್ಮ ಇತಿ ಪ್ರೋಕ್ತೋ ಹರೇರಾಜ್ಞಾSಖಿಲಸ್ಯ ಚ ॥೨೨.೩೩೮॥

ಶತ್ರುಸಂಹಾರ, ಶತ್ರುಜಯದ ಕೀರ್ತಿ,

ತಪ್ಪದೇ ಪಾಲಿಸಬೇಕು ದೈವದ ಆಣತಿ,

ಇವೆರಡಾಗದಿದ್ದರೆ ಕ್ಷತ್ರಿಯರಿಗಿಲ್ಲ ಸದ್ಗತಿ.

ಕ್ಷತ್ರಿಯರಿಂದ ಬೇರೆಯಾದಂಥ ಬ್ರಾಹ್ಮಣ ವೈಶ್ಯ ಶೂದ್ರರಿಗೆ,

ಕೊಂಚ ಹೊರಶತ್ರುಗಳನ್ನು ಕ್ಷಮಿಸುವ ಅವಕಾಶ ಇದೆಯವರಿಗೆ.

ಆದರೆ ಆಂತರಿಕ ಶತ್ರುಗಳಾದ ಕಾಮಕ್ರೋಧಾದಿಗಳಿಗೆ ಕ್ಷಮೆಯಲ್ಲ ಧರ್ಮ,

ಕ್ಷತ್ರಿಯರಿಗೆ ಬಾಹ್ಯ ಶತ್ರುಗಳಲ್ಲೂ ಕ್ಷಮೆ ಕೂಡದು ಅನ್ನುತ್ತದೆ ಪ್ರಾಯೋಧರ್ಮ,

ಇದು ಭಗವಂತನಿಂದಲೇ ಹೇಳಲ್ಪಟ್ಟಿದೆ -  ಇದು ದೈವಾಜ್ಞೆಯ ಮರ್ಮ.

 

ಇತಿ ಭೀಮವಚಃ ಶ್ರುತ್ವಾ ಸಸೋದರ್ಯ್ಯೋ ಯುಧಿಷ್ಠಿರಃ ।

ರಾಕ್ಷಸಸ್ಕನ್ಧಮಾರೂಢಃ ಕೃಷ್ಣಯಾ ಚಾSಯಯೌ ಪುನಃ ॥೨೨.೩೩೯॥

ಭೀಮಸೇನನ ಈ ಮಾತನ್ನು ಕೇಳಿದ ಯುಧಿಷ್ಠಿರ,

ದ್ರೌಪದಿ ಜೊತೆ ಹೊರಟ ಕೂಡಿ ತನ್ನ ತಮ್ಮಂದಿರ.

ಘಟೋತ್ಕಚಾದಿ ರಾಕ್ಷಸರ ಹೆಗಲನ್ನೇರಿ,

ಹಿಡಿದ ಹಸ್ತಿನಪುರದ ಹತ್ತಿರದ ಕಾಡಿನ ದಾರಿ.

 

ಪಾದೇಷು ತೇಷು ನಿವಸತ್ಸು ಹಿಮಾಚಲಸ್ಯ ಯಾಮ್ಯಾಶ್ರಿತೇಷು ಪವಮಾನಸುತಃ ಕದಾಚಿತ್ ।

ಧನ್ವೀ ಮೃಗಾನನುಚರನ್ ಸಹಸಾSSಸಸಾದ ಹಾSಯೋಃ ಸುತಂ ನಹುಷಮಾಜಗರೋರುರೂಪಮ್ ॥೨೨.೩೪೦॥

ಹೀಗೆ ಅವರುಗಳು ಹಿಮಾಚಲ ಪರ್ವತದ ತಪ್ಪಲಲ್ಲಿರುವಾಗ,

ಭೀಮ ಬಿಲ್ಲನ್ನು ಹಿಡಿದು ಬೇಟೆಯಾಡುತ್ತಾ ಸಾಗಿರುವಾಗ,

ಆಯುಪುತ್ರ ಹೆಬ್ಬಾವಿನ ರೂಪದ ನಹುಷನ ನೋಡಿದನಾಗ.

 

[ನಹುಷನಿಗೆ ಅಜಗರ ರೂಪ ಹೇಗೆ ಪ್ರಾಪ್ತಿಯಾಯಿತು ಎನ್ನುವುದರ ವಿವರವನ್ನು ಹೇಳುತ್ತಾರೆ:]

 

ಪೂರ್ವಂ ಹಿ ವೃತ್ರವಧತೋSಮ್ಬುಜನಾಳತನ್ತುಸಂಸ್ಥೇ ಶಚೀಪ್ರಣಯಿನಿ ಪ್ರವಿಚಿನ್ತ್ಯ ದೇವಾಃ ।

ಚಕ್ರುಸ್ತ್ರಿಲೋಕಪತಿಮಾಯುಸುತಂ ವರಂ ಚ ದತ್ವಾSಕ್ಷಿಗೋಚರತಪೋSಸ್ಯ ಬಲಂ ಚ ಸರ್ವಮ್ ॥೨೨.೩೪೧॥

ಬಹಳಹಿಂದೆ ವೃತ್ರನನ್ನು ಕೊಂದಿದ್ದ ಶಚೀಪ್ರಿಯ ದೇವೇಂದ್ರ,

ತಾವರೆಯ ದಂಟಿನೊಳಗಿದ್ದು ತಪಗೈಯ್ಯುತ್ತಿದ್ದ ಆ ಇಂದ್ರ.

ಆಗ ಶುರುವಾಯಿತು ಯಾರನ್ನು ಸ್ವರ್ಗಾಧಿಪತಿ ಮಾಡುವುದೆಂದು ದೇವತೆಗಳಲ್ಲಿ ಗಂಭೀರ ಯೋಚನೆ,

ಆಯುಪುತ್ರ ನಹುಷ ನೋಡಿದವರ ತಪೋಬಲ ಅವನದಾಗುವಂತೆ ವರವಿತ್ತು ಕೊಟ್ಟರು ಇಂದ್ರಪದವಿಯನ್ನ.

 

ಸ ಸರ್ವಸುರವಿಪ್ರೇನ್ದ್ರತಪಶ್ಚ ಬಲಮಕ್ಷಯಮ್ ।

ಅವಾಪ್ಯ ವವೃಧೇ ನಿತ್ಯಂ ದರ್ಪ್ಪಾದೈಚ್ಛಚ್ಛಚೀಮಪಿ ॥೨೨.೩೪೨॥

ನಹುಷ ಎಲ್ಲಾ ದೇವತೆಗಳ  ಶ್ರೇಷ್ಠ ವಿಪ್ರರ ತಪಸ್ಸನ್ನೂ, ಬಲವನ್ನೂ ಹೊಂದಿದ,

ಯೋಗ್ಯತೆ ಮೀರಿ ಬೆಳೆಯುತ್ತಾ ತಾನೇ ಇಂದ್ರನೆಂಬ ದರ್ಪದಿ ಶಚಿಯನ್ನೇ ಬಯಸಿದ.

 

ಸ ಇನ್ದ್ರವಚನಾಚ್ಛಚ್ಯಾ ಮಹರ್ಷಿಗಣವಾಹನೇ ।

ನಿಯುಕ್ತೋ ವಞ್ಚನಾಯೈವ ವಾಹಯಾಮಾಸ ತಾನೃಷೀನ್ ॥೨೨.೩೪೩॥

ಇಂದ್ರ ಶಚೀದೇವಿಗೆ ಹೇಳಿದ ಮಾತಿನ ಪರಿ,

ಶಚೀಯಿಂದ ನಹುಷನ ವಂಚಿಸುವುದೇ ಗುರಿ.

ನೀನು ನನ್ನ ಹೊಂದಲು ಸಪ್ತರ್ಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು ಬರಬೇಕು,

ಹೀಗೆ ಪ್ರೇರಿತನಾದ ನಹುಷ ಸಪ್ತರ್ಷಿಗಳಿಗೆ ಹೇಳಿದ ನೀವೆನ್ನನ್ನು ಹೊರಬೇಕು.

No comments:

Post a Comment

ಗೋ-ಕುಲ Go-Kula