Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 01-06

 

೨೩. ಅಜ್ಞಾತವಾಸಸಮಾಪ್ತಿಃ

̐

ನಾರಾಯಣಾನುಗ್ರಹತೋ ಯಥಾವನ್ನಿಸ್ತೀರ್ಯ್ಯ ತಾನ್ ದ್ವಾದಶಾಬ್ದಾನ್ ವನೇ ತೇ ।

ವಿಸೃಜ್ಯ ಚ ಬ್ರಾಹ್ಮಣಾದೀನ್ ಸಧೌಮ್ಯಾನಜ್ಞಾತವಾಸಾಯ ತತೋ ಮನೋ ದಧುಃ ॥೨೩.೦೧॥

 

ಹರಿ ಅನುಗ್ರದಿಂದ ಪಾಂಡವರು ಕಾಡಲ್ಲಿ ಕೊರತೆ ಇಲ್ಲದೇ ಕಳೆದರು ಹನ್ನೆರಡು ವರುಷ,

ಧೌಮ್ಯ ಮುಂತಾದ ಬ್ರಾಹ್ಮಣರನ್ನು ಕಳಿಸಿಕೊಟ್ಟು ನಿಶ್ಚಯಿಸಿದರು ಕೈಗೊಳ್ಳಲು ಅಜ್ಞಾತವಾಸ.

 

ಗತ್ವಾ ವಿರಾಟಸ್ಯ ಪುರೀಂ ನಿಧಾಯ ಹೇತೀಃ ಶಮ್ಯಾಂ ಛನ್ನರೂಪಾ ಬಭೂವುಃ ।

ಯತಿಃ ಸೂದಃ ಷಣ್ಢವೇಷೋsಶ್ವಸೂತವೇಷೋ ಗೋಪೋ ಗನ್ಧಕರ್ತ್ತ್ರಿ ಚ ಜಾತಾಃ ॥೨೩.೦೨॥

ವಿರಾಟನ ಪಟ್ಟಣಕ್ಕೆ ಹೋಗಿ ಸೇರಿದರು ಪಾಂಡವರು,

ಶಮೀವೃಕ್ಷದಿ ಆಯುಧಗಳನ್ನಿಟ್ಟು ವೇಷ ಮರೆಸಿಕೊಂಡರು.

ಧರ್ಮರಾಜ ಯತಿಯಾಗಿ ವೇಷ ಧರಿಸಿದ,

ಭೀಮಸೇನ ಅಡಿಗೆಯವನ ವೇಷ ಹಾಕಿದ,

ಅರ್ಜುನ ನಾಟ್ಯ ಕಲಿಸುವ ಬೃಹನ್ನಳೆಯಾದ,

ನಕುಲ ಕುದುರೆ ಕಾಯುವವನ ವೇಷ ತೊಟ್ಟ,

ಸಹದೇವ ತಾನು ಗೋಪಾಲಕನ ವೇಷವ ಉಟ್ಟ,

ದ್ರೌಪದಿ ಆರಿಸಿಕೊಂಡಳು ಗಂಧಕರ್ತ್ರಿಯ ಪಟ್ಟ.

 

ಸರ್ವೇ ವಿರಾಟಂ ಯಯುರತ್ರ ದೇವವತ್ ಸಮ್ಭಾವಿತಾಸ್ತೇನ ಶುಭೋರುಲಕ್ಷಣಾಃ ।

ಯುಧಿಷ್ಠಿರಸ್ಯೈವ ಶುಶ್ರೂಷಣಂ ತೇ ಚಕ್ರುರ್ಹೃದಾ ವಾಸುದೇವಸ್ಯ ನಾನ್ಯತ್ ॥೨೩.೦೩॥

 ಅವರೆಲ್ಲರೂ ಒಟ್ಟಿಗೆ ವಿರಾಟ ರಾಜನ ಬಳಿಗೆ ಬರುತ್ತಾರೆ,

ಲಕ್ಷಣವಂತರಾದ್ದರಿಂದ ದೇವತೆಗಳಂತೆ ಗೌರವಿಸಲ್ಪಡುತ್ತಾರೆ.

ಅವರೆಲ್ಲರಲ್ಲಿತ್ತು ಧರ್ಮರಾಜನಲ್ಲಿರುವ ದೈವಾನುಸಂಧಾನ,

ಅದು ದೈವಸೇವೆಯೇ ಹೊರತು ಅನ್ಯವಲ್ಲ ಎಂಬ ದೃಢ ಜ್ಞಾನ.

 

ಪರಾಪಾಕೋ ಗೃಹಸ್ತಸ್ಯ ಕ್ಷತ್ರಿಯಸ್ಯ ವಿಶೇಷತಃ ।

ನ ಯೋಗ್ಯ ಇತಿ ಸೂದಸ್ಯ ಬಭ್ರೇ ವೇಷಂ ವೃಕೋದರಃ ॥೨೩.೦೪॥

 

ವೈದಿಕವ್ಯವಹಾರೇಷು ಜ್ಞಾನಾಧಿಕ್ಯಪ್ರಸಿದ್ಧಿತಃ ।

ಜಾನೀಯುರ್ಭೀಮ ಇತ್ಯೇವ ಶೂದ್ರವೇಷಸ್ತತೋsಭವತ್ ॥೨೩.೦೫॥

 ಗೃಹಸ್ತ, ಕ್ಷತ್ರಿಯನಿಗೆ ಪರಪಾಕವದು ನಿಷಿದ್ಧ,

ಹಾಗಾಗೇ ಭೀಮ ತಾನು ಅಡಿಗೆಯವನಾದ.

ಇನ್ಯಾವುದೇ ರೂಪದಲ್ಲಿ ಭೀಮ ಸಭೆಯಲ್ಲಿದ್ದಾಗ,

ಸಭೆಯಲ್ಲಿ ವೇದ ಸಂಬಂಧಿತ ಚರ್ಚೆ ನಡೆದಾಗ,

ಭೀಮ ಹರಿಸಲೇಬೇಕಾಗುತ್ತದೆ ತನ್ನ ಜ್ಞಾನದ ಝರಿ,

ಇವನೇ ಭೀಮನೆಂದರಿಯುವ ಸಾಧ್ಯತೆಗಿರುತ್ತದೆ ದಾರಿ.

ಹೀಗಾಗಿ ಭೀಮಸೇನನಾಗುತ್ತಾನೆ ಶೂದ್ರ ವೇಷಧಾರಿ.


[ಹಾಗಿದ್ದರೆ ಇಲ್ಲಿ ಪಾಂಡವರು ಪರರ ಅನ್ನದಿಂದ ಉಪಜೀವನ ನಡೆಸುವುದು ಅವರಿಗೆ ಹೇಗೆ ಯೋಗ್ಯ ಎಂದರೆ ಹೇಳುತ್ತಾರೆ: ]

 

ಸ್ವೀಯಂ ವೇದವಿದಾಂ ಸರ್ವಂ ದೇವೇಶಾನಾಂ ಚ ಕಿಂ ಪುನಃ ।

ಅತಸ್ತೇsನ್ಯಾಶ್ರಯಂ ನೈವ ಚಕ್ರುಃ ಸ್ವಬಲಸಂಶ್ರಯಾತ್ ॥೨೩.೦೬॥

ವೇದಬಲ್ಲ ಮನುಷ್ಯನಿಗೇ ಇದು ಹಕ್ಕೆಂದು ಸಿದ್ಧ,

ದೇವತೆಗಳಾದ ಪಾಂಡವರಾಗಲೇ ಬೇಕು ಬದ್ಧ.

ಪಾಂಡವರಿಗೆ ಅದು ತಮ್ಮ ಸ್ವಯಂ ಗಳಿಕೆಯ ಭಾಗ,

ಬೇರೊಬ್ಬರನ್ನಾಶ್ರಯಿಸಿದ ಸಂಕೋಚಕ್ಕಲ್ಲಿಲ್ಲ ಜಾಗ.

(ಕೀಚಕ ಹಿಂದೊಮ್ಮೆ ಭೀಮನಿಂದ ಸೋತಿದ್ದ,

ಸೋತವನ ಧನ ಗೆದ್ದವನದೇ ಎಂಬುದು ಸಿದ್ಧ. )


No comments:

Post a Comment

ಗೋ-ಕುಲ Go-Kula