Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 281-287

 

ಕ್ರಮೇಣ ಪಾರ್ತ್ಥಾ ಅಪಿ ಶೈಶಿರಂ ಗಿರಿಂ ಸಮಾಸದಂಸ್ತತ್ರ ಕೃಷ್ಣಾಂ ಸುದುರ್ಗ್ಗೇ ।

ವಿಷಜ್ಜನ್ತೀಮೀಕ್ಷ್ಯ ತೈಃ ಸಂಸ್ಮೃತೋSಥ ಹೈಡಿಮ್ಬ ಆಯಾತ್ ಸಹಿತೋ ನಿಶಾಚರೈಃ ॥೨೨.೨೮೧॥

ಆನಂತರ ಕೃಷ್ಣಪರಮಾತ್ಮನಿಂದ ಬೀಳ್ಕೊಂಡವರಾದ ಪಾಂಡವರು,

ಪ್ರಭಾಸದಿಂದ ಹೊರಟವರಾಗಿ ಹಿಮಾಲಯ ಪರ್ವತ ಸೇರಿದರು.

ಹಿಮಾಲಯವದು ಬಲು ಕಡಿದಾದ ಪರ್ವತ ಪ್ರದೇಶ,

ಪಾಂಡವರು ಗಮನಿಸಿದರು ದ್ರೌಪದಿಗಾದ ಆಯಾಸ.

ಆಗ ಘಟೋತ್ಕಚನ ಸ್ಮರಣೆಯಾಯಿತು ಪಾಂಡವರಿಂದ,

ಒಡನೆ ಘಟೋತ್ಕಚ ರಾಕ್ಷಸರೊಡಗೂಡಿ ಅಲ್ಲಿಗೆ ಬಂದ.

 

ಉವಾಹ ಕೃಷ್ಣಾಂ ಸ ತು ತಸ್ಯ ಭೃತ್ಯಾ ಊಹುಃ ಪಾರ್ತ್ಥಾಂಸ್ತೇ ಬದರ್ಯ್ಯಾಶ್ರಮಂ ಚ ।

ಪ್ರಾಪ್ಯಾತ್ರ ನಾರಾಯಣಪೂಜಯಾ ಕೃತಸ್ವಕೀಯಕಾರ್ಯ್ಯಾ ಯಯುರುತ್ತರಾಂ ದಿಶಮ್ ॥೨೨.೨೮೨॥

ಘಟೋತ್ಕಚ ಹೊತ್ತುಕೊಂಡ ತಾಯಿ ದ್ರೌಪದೀದೇವಿಯನ್ನು,

ಅವನ ದಾಸರು ಹೊತ್ತುಕೊಂಡರು ಮಿಕ್ಕೆಲ್ಲ ಪಾಂಡವರನ್ನು.

ಹೀಗೆ ಪಾಂಡವರು ಬದರೀಕಾಶ್ರಮ ಸೇರಿದರು,

ಅಲ್ಲಿ ಭಗವಂತ ನಾರಾಯಣನನ್ನು ಪೂಜಿಸಿದರು.

ತಮ್ಮ ಕಾರ್ಯ ಮುಗಿಸಿ ಉತ್ತರಕ್ಕೆ ಹೊರಟರು.

 

ಅತೀತ್ಯ ಶರ್ವಶ್ವಶುರಂ ಗಿರಿಂ ತೇ ಸುವರ್ಣ್ಣಕೂಟಂ ನಿಷಧಂ ಗಿರಿಂ ಚ ।

ಮೇರೋಃ ಪ್ರಾಚ್ಯಾಂ ಗನ್ಧಮಾದೇ ಗಿರೌ ಚ ಪ್ರಾಪುರ್ಬದರ್ಯ್ಯಾಶ್ರಮಮುತ್ತಮಂ ಭುವಿ ॥೨೨.೨೮೩॥

ಪಾಂಡವರು ರುದ್ರನ ಮಾವನಾದ ಹಿಮವತ್ಪರ್ವತ  ದಾಟುತ್ತಾರೆ,

ಬಂಗಾರದ ಶಿಖರವುಳ್ಳಂಥ ನಿಷಧ ಪರ್ವತವನ್ನೂ ದಾಟುತ್ತಾರೆ.

ಮೇರುಪರ್ವತದ ಪೂರ್ವದಿಕ್ಕಿಗಿರುವ ಗಂಧಮಾದನ ಗಿರಿಮಡಿಲಲ್ಲಿ,

ತಲುಪುತ್ತಾರೆ ಭುವಿಯಲ್ಲೇ ಶ್ರೇಷ್ಠವಾದ ಇನ್ನೊಂದು ಬದರೀಕಾಶ್ರಮದ ಬಳಿ.

 

ತಸ್ಮಿನ್ ಮುನೀನ್ದ್ರೈರಭಿಪೂಜ್ಯಮಾನಾ ನಾರಾಯಣಂ ಪೂಜಯನ್ತಃ ಸದೈವ ।

ಚಕ್ರುಸ್ತಪೋ ಜ್ಞಾನಸಮಾಧಿಯುಕ್ತಂ ಸತ್ತತ್ವವಿದ್ಯಾಂ ಪ್ರತಿಪಾದಯನ್ತಃ ॥೨೨.೨೮೪॥

ಆ ಬದರೀಕಾಶ್ರಮದಲ್ಲಿ ಮುನಿಗಳಿಂದ ಪಾಂಡವರು ಸತ್ಕರಿಸಲ್ಪಡುತ್ತಾರೆ,

ನಾರಾಯಣನ ಪೂಜಿಸುತ್ತಾ ಜ್ಞಾನ ಧ್ಯಾನದ ತಪಸ್ಸನ್ನು ಮಾಡುತ್ತಾರೆ.

 

ಏವಂ ಬದರ್ಯ್ಯಾಂ ವಿಹರತ್ಸು ತೇಷು ಕ್ವಚಿದ್ ರಹಃ ಕೃಷ್ಣಯಾ ವಾಯುಸೂನೌ ।

ಸ್ಥಿತೇ ಗರುತ್ಮಾನುರಗಂ ಜಹಾರ ಮಹಾಹ್ರದಾದ್ ವಾಸುದೇವಾಸನಾಗ್ರ್ಯಃ ॥೨೨.೨೮೫ll

ಈರೀತಿಯಾಗಿ ಬದರಿಯಲ್ಲಿ ಪಾಂಡವರು ವಿಹಾರ ಮಾಡುತ್ತಿರಲು,

ಭೀಮಸೇನ ದ್ರೌಪದಿಯರು ಒಮ್ಮೆ ಏಕಾಂತದಲ್ಲಿ ಇರುತ್ತಿರಲು,

ಭಗವಂತನ ವಾಹನಗಳಲ್ಲೇ ಶ್ರೇಷ್ಠವಾಹನನಾದ ಗರುಡನಿಂದ,

ಹಾವೊಂದರ ಅಪಹಾರವಾಯಿತು ಅಲ್ಲಿನ ಒಂದು ಸರೋವರದಿಂದ.

 

ತತ್ಪಕ್ಷವಾತೇನ ವಿಚಾಲಿತೇ ತು ತಸ್ಮಿನ್ ಗಿರೌ ಕಮಲಂ ಹೈಮಮಗ್ರ್ಯಮ್ ।

ಪಪಾತ ಕೃಷ್ಣಾಭೀಮಯೋಃ ಸನ್ನಿಧಾನ ಉದ್ಯದ್ಭಾನೋರ್ಮ್ಮಣ್ಡಲಾಭಂ ಸುಗನ್ಧಮ್ ॥೨೨.೨೮೬॥

ಅಮೋಘವಾದ ಗರುಡನ ರೆಕ್ಕೆಯ ಬಡಿತ,

ಗಂಧಮಾದನ ಪರ್ವತಕ್ಕಾಯಿತು ಅಲುಗಾಟ.

ಹುಟ್ಟುವ ಸೂರ್ಯಮಂಡಲದಂತೆ ಆ ಕಮಲ ಹೊಳೆಯುತ್ತಿತ್ತು,

ಬಂಗಾರಮಯವಾಗಿ ಶ್ರೇಷ್ಠವಾದ ಆ ತಾವರೆ ಸುಗಂಧಿತವಾಗಿತ್ತು,

ಅಂಥಾ ತಾವರೆಯೊಂದು ಭೀಮ ದ್ರೌಪದಿಯರ ಬಳಿ ಬಂದು ಬಿತ್ತು.

 

ದೃಷ್ಟ್ವಾSತಿಗನ್ಧಂ ವರಹೇಮಕಞ್ಜಂ ಕುತೂಹಲಾದ್ ದ್ರೌಪದೀ ಭೀಮಸೇನಮ್ ।

ಬಹೂನ್ಯಯಾಚತ್ ತಾದೃಶಾನ್ಯಾನುಭಾವಮವಿಷಹ್ಯಂ ಜಾನತೀ ದೇವದೈತ್ಯೈಃ ॥೨೨.೨೮೭॥

ದ್ರೌಪದಿ ಆ ಪರಿಮಳಯುಕ್ತ ಶ್ರೇಷ್ಠ ಸುವರ್ಣ ತಾವರೆ ನೋಡಿ,

ಅಂಥವೇ ಬಹಳ ಕಮಲಗಳ ಕೇಳುತ್ತಾಳೆ ಭೀಮನಲ್ಲಿ ಬೇಡಿ.

ಅವಳಿಗರಿವಿತ್ತು ದೇವ ದಾನವರಿಂದ ಎದುರಿಸಲಾಗದ ಭೀಮಬಲ,

ಹಾಗಾಗಿಯೇ ಭೀಮನ ಕೇಳಿದಳು ಕಮಲಗಳ ಹೊಂದಿ ಕುತೂಹಲ.

No comments:

Post a Comment

ಗೋ-ಕುಲ Go-Kula