Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 399-409

 

ವನೇ ವಸತ್ಸ್ವೇವ ಚ ಪಾಣ್ಡವೇಷು ಚಕ್ರೇ ಯಜ್ಞಂ ಪೌಣ್ಡರೀಕಾಖ್ಯಮೇವ ।

ಸಂಸ್ಪರ್ಧಯಾ ರಾಜಸೂಯಸ್ಯ ರಾಜಾ ದುರ್ಯ್ಯೋಧನೋ ನಾಪ್ಯಸೌ ತತ್ಕಲಾರ್ಹಃ ॥೨೨.೩೯೯॥

ಪಾಂಡವರು ಕಾಡಿನಲ್ಲಿ ವಾಸ ಮಾಡುತ್ತಿರುವಾಗ,

ರಾಜ ದುರ್ಯೋಧನ ಮಾಡಿದ ಪೌಂಡರೀಕ ಯಾಗ.

ಅವನು ಅದನ್ನು ಮಾಡಿದ್ದು ಪಾಂಡವರ ರಾಜಸೂಯ ಯಾಗದ ಸ್ಪರ್ಧೆಯಿಂದ,

ಆದರೆ ಆ ಯಾಗವು ಸಮವಿರಲಿಲ್ಲ ಹದಿನಾರಾನೇ ಒಂದುಭಾಗಕ್ಕೂ ಹೋಲಿಕೆಯಿಂದ.

 

[ಇದನ್ನು ವೇದವ್ಯಾಸರು ಮಹಾಭಾರತದಲ್ಲಿ(ವನಪರ್ವ ೨೫೮.೩) ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ: ‘ಯೌಧಿಷ್ಠಿರಸ್ಯ ಯಜ್ಞಸ್ಯ ನ ಸಮೋ ಹೇಷ ತೇ ಕ್ರತುಃ । ನೈವ ತಸ್ಯ ಕ್ರತೋರೇಷ ಕಲಾಮರ್ಹತಿ ಷೋಡಶೀಮ್’]

 

ದುರ್ಯ್ಯೋಧನಸ್ಯಾSಜ್ಞಯಾ ಪಾಣ್ಡವಾನಾಂ ದುಃಶಾಸನಃ ಪ್ರೇಷಯಾಮಾಸ ತತ್ರ ।

ಆಗಚ್ಛತೇತ್ಯವಮಾನಾಯ ತಂ ತು ಭೀಮೋSವಾದೀದ್ ರಣಯಜ್ಞಂ ಸ್ವಗಮ್ಯಮ್ ॥೨೨.೪೦೦॥

ದುರ್ಯೋಧನನ ಆಜ್ಞೆಯಂತೆ ದೂತನ ಕಳಿಸಿದ ದುಶ್ಯಾಸನ,

ಪಾಂಡವರಿಗಿತ್ತ ಆಹ್ವಾನದ ಹಿಂದಿನುದ್ದೇಶವದು ಅವಮಾನ.

ಪಾಂಡವರ ಬಳಿ ಬಂದು ಯಜ್ಞಕ್ಕೆ ಕರೆದ ದುಶ್ಯಾಸನನ ಆಳು,

ಭೀಮನೆಂದ- ನಾವು ರಣಯಜ್ಞಕ್ಕೆ ಬರುತ್ತೇವೆಂದು ಹೇಳು.

 

ತತೋ ದಿನೈಃ ಕೈಶ್ಚನ ಧಾರ್ತ್ತರಾಷ್ಟ್ರಾಃ ಸಕರ್ಣ್ಣಗಾನ್ಧಾರನೃಪಾಃ ಕುಮನ್ತ್ರತಃ ।

ಸಭಾರ್ಯ್ಯಕಾಃ ಪಾಣ್ಡವಾನ್ ದ್ರೌಪದೀಂ ಚ ಮಹೈಶ್ವರ್ಯ್ಯಂ ದರ್ಶಯಿತ್ವಾSವಮನ್ತುಮ್ ॥೨೨.೪೦೧॥

 

ತೇ ಸ್ಯನ್ದನೈಃ ಕಾಞ್ಚನರತ್ನಚಿತ್ರೈರ್ಮ್ಮಹಾಗಜೈಸ್ತುರಗೈಃ ಪತ್ತಿಭಿಷ್ಚ ।

ಸ್ವಲಙ್ಕೃತಾಶ್ಚಿತ್ರಮಾಲ್ಯಾಮ್ಬರಾಶ್ಚ ವಿನಿರ್ಯ್ಯಯುರ್ದ್ದ್ವೈತವನಾಯ ಶೀಘ್ರಮ್ ॥೨೨.೪೦೨॥

ತದನಂತರ ಕೆಲವು ದಿನಗಳು ಗತಿಸಿದ ಮೇಲೆ,

ದುರ್ಯೋಧನಾದಿಗಳದು ದುರಾಲೋಚನೆ ಲೀಲೆ.

ತಮ್ಮ ಹೆಂಡಂದಿರು, ಕರ್ಣ, ಶಕುನಿ ಮೊದಲಾದವರೊಂದಿಗೆ,

ಐಶ್ವರ್ಯ,ವೈಭವ ಮೆರೆಸಿ ಪಾಂಡವರ ಅವಮಾನಿಸುವ ಬಗೆ.

ಸಕಲ ವೈಭವ ವಸ್ತ್ರ ಮಾಲೆ ಆಭರಣಗಳೊಂದಿಗೆ ಸಿಂಗರಿಸಿಕೊಂಡು,

ದ್ವೈತವನಕ್ಕೆ ಹೊರಟರು ಪಾಂಡವರು ದ್ರೌಪದಿಗೆ ಅವಮಾನಿಸಲೆಂದು.

 

ಗವಾಂ ದೃಷ್ಟಿಚ್ಛದ್ಮನಾ ನಿರ್ಗ್ಗತಾಂಸ್ತಾನ್ ಜ್ಞಾತ್ವಾ ಶಕ್ರಸ್ತೇಜಸೋ ಭಙ್ಗಕಾಮಃ ।

ತತ್ಸಾಮರ್ತ್ಥ್ಯಂ ವರಮಸ್ಮೈ ಪ್ರದಾಯ ತದ್ವನ್ಧನಾಯಾದಿಶಚ್ಚಿತ್ರಸೇನಮ್ ॥೨೨.೪೦೩॥

ಗೋವುಗಳು ಬೆಳೆಯುತ್ತಿವೆ ಕಾಡಿನೊಳಗೆ,

ಹೊರಟಿರುವುದು ಅವುಗಳ ನೋಡಿ ಎಣಿಕೆಗಾಗೇ.

ಇದು ಮೇಲ್ನೋಟಕ್ಕೆ ದುರ್ಯೋಧನ ತೆಗೆದುಕೊಂಡ ನಿಲುವು,

ಮೂಲ ತಿಳಿದ ಇಂದ್ರಗಿತ್ತು, ಅವರ ಸೊಕ್ಕನ್ನು ಅಡಗಿಸುವ ಅರಿವು.

ಆ ಸಾಮರ್ಥ್ಯದ ವರವಿತ್ತು ಕಳಿಸಿದ ಚಿತ್ರಸೇನನನ್ನು,

ಆಜ್ಞೆ ಮಾಡಿದ ಬಂಧನ ಮಾಡಲು ದುರ್ಯೋಧನನನ್ನು.

 

ಸ ಷಷ್ಟಿಸಾಹಸ್ರಕಕೋಟಿಯೂಥಪೈರ್ಗನ್ಧರ್ವಮುಖ್ಯೈಃ ಸಂವೃತೋSಗಾತ್ ಸರಸ್ತತ್ ।

ಯಸ್ಮಿನ್ ಸ್ನಾತುಂ ವಾಞ್ಛತಿ ಧಾರ್ತ್ತರಾಷ್ಟ್ರಸ್ತದಾಜ್ಞಯಾ ಪುರುಷಾಸ್ತಾನಥೋಚುಃ ॥೨೨.೪೦೪॥

ಚಿತ್ರಸೇನ ಅರವತ್ತುಸಾವಿರ ಕೋಟಿ ಗಂಧರ್ವರೊಂದಿಗೆ ಬಂದ,

ದುರ್ಯೋಧನ ಸ್ನಾನ ಮಾಡಲಿದ್ದ ಸರೋವರದ ಬಳಿ ಬಂದು ನಿಂದ.

ಆಗ ಹೇಳಿಕೆ ಬಂದಿತು - ದುರ್ಯೋಧನನ ಸೈನಿಕರ ಕಡೆಯಿಂದ.

 

ಸ್ನಾತುಂ ಸಮಾಯಾಸ್ಯತಿ ಧಾರ್ತ್ತರಾಷ್ಟ್ರೋ ರಾಜೇಶ್ವರೋ ನಿಸ್ಸರಧ್ವಂ ತದಸ್ಮಾತ್ ।

ತೀರ್ತ್ಥಾದಾಜ್ಞಾಂ ಧಾರಯನ್ತಶ್ಚ ತಸ್ಯೇತ್ಯುಕ್ತಾ ಗನ್ಧರ್ವಾ ಜಹಸುಸ್ತಾನಥೋಚ್ಚೈಃ ॥೨೨.೪೦೫॥

ಸ್ನಾನಕ್ಕೆಂದು ಬರುತ್ತಿರುವವನು ಚಕ್ರವರ್ತಿ ದುರ್ಯೋಧನ,

ಹಾಗಾಗಿ ಈ ಸರೋವರ ಬಿಟ್ಟು ಹೋಗಿರಿ ನೀವು ಈ ಕ್ಷಣ.

ಹೀಗೆ ದುರ್ಯೋಧನನ ದೂತರು ಹೇಳಿದಾಗ,

ಗಂಧರ್ವರು ನಗುತ್ತಾ ಹಾಸ್ಯ ಮಾಡಿದರಾಗ.

 

ಊಚುರ್ವಯಂ ಮಾನಯಾಮಸ್ತದಾಜ್ಞಾಂ ತ್ರಿಲೋಕಾನಾಂ ಯಃ ಪತಿಃ ಶಕ್ರದೇವಃ ।

ನ ಮಾನುಷಾಣಾಮಪಿ ಚಕ್ರವರ್ತ್ತಿನಾಂ ಕಿಮ್ವಲ್ಪಸಾರಸ್ಯ ಸುಯೋಧನಸ್ಯ ॥೨೨.೪೦೬॥

ನಾವು ಗೌರವಿಸುವುದು ಮೂರ್ಲೋಕದೊಡೆಯ ಇಂದ್ರನ ಮಾತು,

ಹೀಗಿರುವಾಗ ಮನುಷ್ಯ ಚಕ್ರವರ್ತಿಯ ಆಜ್ಞೆಗೇನು ಇರುತ್ತದೆ ಕಿಮ್ಮತ್ತು.

ಅವನು ಅಲ್ಪ ಬಲದ ದುರ್ಯೋಧನ,

ಗೌರವಿಸುವುದಿಲ್ಲ ನಾವವನ ಆಜ್ಞೆಯನ್ನ.

 

ಇತೀರಿತೇ ಕುಪಿತೋ ಧಾರ್ತ್ತರಾಷ್ಟ್ರೋ ಜಘಾನ ಗನ್ಧರ್ವವರಾಞ್ಛರೌಘೈಃ ।

ಜಘ್ನುಃ ಸಕರ್ಣ್ಣಾ ಅಪಿ ತಸ್ಯ ಸೋದರಾ  ಜಘ್ನುಶ್ಚ ತೇ ಧಾರ್ತ್ತರಾಷ್ಟ್ರಸ್ಯ ಸೇನಾಮ್ ॥೨೨.೪೦೭॥

ಹೀಗೆ ಹೇಳುತ್ತಿರುವಾಗ ಕೋಪಗೊಂಡ ದುರ್ಯೋಧನ,

ಬಾಣಗಳ ಪ್ರಯೋಗಿಸಿ ಹೊಡೆಯುತ್ತಾನೆ ಗಂಧರ್ವಶ್ರೇಷ್ಠರನ್ನ.

ಕರ್ಣ ಮತ್ತು ದುರ್ಯೋಧನನ ತಮ್ಮಂದಿರು,

ಗಂಧರ್ವರ ಮೇಲೆ ಯುದ್ಧದ ದಾಳಿ ಮಾಡಿದರು.

 

ಮುಹೂರ್ತ್ತಮಾಸೀತ್ ಸಮಮೇವ ಯುದ್ಧಂ ತೇಷಾಂ ತದಾ ಧಾರ್ತ್ತರಾಷ್ಟ್ರಸ್ಯ ಚೈವ ।

ಪುರಾಂ ಬಿನ್ಧೋರ್ವರತೋ ಮಾಯಯಾ ಚ  ಗನ್ಧರ್ವವೀರಾ ವವೃಧುಸ್ತತಃ ಸ್ಮ ॥೨೨.೪೦೮॥

ಗಂಧರ್ವರಿಗೂ ದುರ್ಯೋಧನನಿಗೂ ಮಧ್ಯದ ಆ ಯುದ್ಧ ನಡೆಯಿತು ಒಂದು ಮುಹೂರ್ತ ಸಮ,

ದೈತ್ಯಛೇದನದ ಇಂದ್ರವರದ ಮಾಯೆಯಿಂದ ದೊರಕಿತು ಗಂಧರ್ವರಿಗೆ ವಿಜಯದ ಸುಮ.

 

ತೇಜೋಭಙ್ಗಂ ತತ್ರ ಸುಯೋಧನಸ್ಯ ಪಾರ್ತ್ಥಾರ್ತ್ಥಮತ್ರ ಪ್ರವಿಧಾತುಮೇವ ಚ ।

ಬಲಂ ದದಾವಬ್ಜಜಃ ಕೇಶವಶ್ಚ ಗನ್ಧರ್ವಾಣಾಂ ತೇSಭ್ಯಯುರ್ದ್ದಾರ್ತ್ತರಾಷ್ಟ್ರಾನ್ ॥೨೨.೪೦೯॥

ಪಾಂಡವರಿಗೋಸ್ಕರ, ದುರ್ಯೋಧನನ ಸೊಕ್ಕು ಮುರಿಯಲೆಂದೇ,

ಗಂಧರ್ವರ ಬಲವಿತ್ತದು -ಬ್ರಹ್ಮ ನಾರಾಯಣರ ಹರಕೆಯಿಂದೇ.

ಗಂಧರ್ವರು ದುರ್ಯೋಧನಾದಿಗಳನೆದುರಿಸಿದ್ದು ದೈವಾನುಗ್ರಹದಿಂದೇ.

No comments:

Post a Comment

ಗೋ-ಕುಲ Go-Kula