Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 36-48

 

ತತೋSಪರದಿನೇ ಸರ್ವೇ ಭೀಷ್ಮದ್ರೋಣಪುರಸ್ಸರಾಃ ।

ರಹಿತಂ ಕೀಚಕೈರ್ಮ್ಮಾತ್ಸ್ಯಂ ಶಕ್ಯಂ ಮತ್ವಾSಭಿನಿರ್ಯ್ಯಯುಃ ॥೨೩.೩೬॥

ಕೀಚಕನ ಸಾವಿನ ಮಾರನೇ ದಿನ ಮತ್ಸ್ಯದೇಶವಾಗಿತ್ತು ಕೀಚಕ ರಹಿತ,

ಭೀಷ್ಮದ್ರೋಣಾದಿಗಳು ಹೊರಟರು ಸುಲಭತುತ್ತು ವಿರಾಟ ನಗರದತ್ತ.

 

[ಹಾಗಿದ್ದರೆ ಈ ಹಿಂದೆ ಏಕೆ ಈ ಭೀಷ್ಮಾದಿಗಳು ವಿರಾಟನನ್ನು ಗೆಲ್ಲುವ ಪ್ರಯತ್ನ ಮಾಡಿರಲಿಲ್ಲ ಎಂದರೆ ಹೇಳುತ್ತಾರೆ-]

 

ಕೀಚಕಸ್ಯ ಹಿಡಿಮ್ಬಸ್ಯ ಬಕಕಿರ್ಮ್ಮೀರಯೋರಪಿ ।

ಜರಾಸನ್ಧಸ್ಯ ನೃಪತೇಃ ಕಂಸಾದೀನಾಂ ಚ ಸರ್ವಶಃ ॥೨೩.೩೭॥

 

ನ ಬಾಧನಾಯ ಭೀಷ್ಮಾದ್ಯಾ ಅಪಿ ಶೇಕುಃ ಕಥಞ್ಚನ ।

ತಸ್ಮಾತ್ ತೇ ಕೀಚಕಂ ಶಾನ್ತಂ ಶ್ರುತ್ವಾ ಮಾತ್ಸ್ಯಂ ಯಯುರ್ಯ್ಯುಧೇ ॥೨೩.೩೮॥

ಕೀಚಕ, ಹಿಡಿಂಬ, ಬಕ, ಕಿರ್ಮೀರ, ಜರಾಸಂಧ ಮತ್ತು ಕಂಸ,

ಇವರಗೆಲ್ಲುವುದಾಗಿರಲಿಲ್ಲ ಭೀಷ್ಮಾದಿಗಳಿಗೂ ನಿರಾಯಾಸ.

ಭೀಷ್ಮಾದಿಗಳಿಗೆ ಸ್ಪಷ್ಟವಾಗಿತ್ತು ಕೀಚಕನ ಮರಣ,

ವಿರಾಟನಗರದ ಮೇಲೆ ಆಕ್ರಮಿಸಲಾಗಿತ್ತು ಕಾರಣ.

 

[ದ್ರೋಣಾಚಾರ್ಯರು ಈ ಯುದ್ಧದಲ್ಲಿ ಪಾಲ್ಗೊಂಡಿರುವುದಕ್ಕೆ ಕಾರಣವನ್ನು ಹೇಳುತ್ತಾರೆ-]

 

ಯತಿಷ್ಯೇ ರಕ್ಷಿತುಂ ಭೀಮಾದ್ ಧಾರ್ತ್ತರಾಷ್ಟ್ರಾನಿತಿ ಸ್ವಕಾಮ್ ।

ಸತ್ಯಾಂ ಕರ್ತ್ತುಂ ಪ್ರತಿಜ್ಞಾಂ ತು ಯಯೌ ದ್ರೋಣಃ ಸಪುತ್ರಕಃ ॥೨೩.೩೯॥

ಭೀಮಸೇನನಿಂದ ದುರ್ಯೋಧನಾದಿಗಳ ರಕ್ಷಿಸುವ ಪ್ರಯತ್ನದ ಪಣವನ್ನ,

ತೊಟ್ಟಿದ್ದರಿಂದ ಮಗ ಅಶ್ವತ್ಥಾಮನ ಜೊತೆ ಹೊರಡುತ್ತಾರೆ ಆಚಾರ್ಯ ದ್ರೋಣ.

 

[ಯುದ್ಧಕ್ಕೆಂದು ಬರುತ್ತಿರುವ ಕೌರವಾದಿಗಳ ಯೋಚನೆ ಏನಿತ್ತು? ಅವರಿಗೆ ನಿಖರವಾಗಿ ಪಾಂಡವರು ವಿರಾಟನಗರದಲ್ಲಿದ್ದಾರೆ ಎಂದು ಗೊತ್ತಿತ್ತೇ? - ]

 

ಯದಿ ಯುದ್ಧಾಯ ನಿರ್ಯ್ಯಾನ್ತಿ ಜ್ಞಾತಾಃ ಸ್ಯುಃ ಪಾಣ್ಡವಾಸ್ತದಾ ।

ನ ಚೇದ್ ವಿರಾಟಮನತಂ ನಮಯಿಷ್ಯಾಮಹೇ ವಯಮ್ ।

ಇತಿ ಮತ್ವಾ ವಿರಾಟಸ್ಯ ಜಗೃಹುರ್ಗ್ಗಾಃ ಸಮನ್ತತಃ ॥೨೩.೪೦॥

ಒಂದೊಮ್ಮೆ ಪಾಂಡವರು ಯುದ್ಧಕೆ ಬಂದರೆ ಆಗುವುದು ಅವರ ಪತ್ತೆ ಕಾರ್ಯ,

ಇಲ್ಲದಿರೆ ವಿರಾಟನ ಬಗ್ಗಿಸುವುದಾಗಲೆಂದು ಮಾಡಿದರು ಗೋವು ಅಪಹಾರ.

 

ತದೋತ್ತರಃ ಸಾರಥಿತ್ವೇ ಪ್ರಕಲ್ಪ್ಯ ಪಾರ್ತ್ಥಂ ಯಯೌ ತಾನ್ ನಿಶಾಮ್ಯೈವ ಭೀತಃ ।

ತತೋSರ್ಜ್ಜುನಃ ಸಾರಥಿಂ ತಂ ವಿಧಾಯ ಕೃಚ್ಛ್ರೇಣ ಸಂಸ್ಥಾಪ್ಯ ಚ ತಂ ಯಯೌ ಕುರೂನ್ ॥೨೩.೪೧॥

ಆಗ ವಿರಾಟರಾಜನ ಮಗನಾದಂಥ ಉತ್ತರಕುಮಾರ ತಾನು,

ಅರ್ಜುನನ ಸಾರಥಿ ಮಾಡಿಕೊಂಡು ಕೌರವರನೆದುರಿಸಲು ಬರುವನು.

ಆದರೆ ಕೌರವರನ್ನು ನೋಡಿಯೇ ಉತ್ತರಕುಮಾರ ಭಯಗ್ರಸ್ತನಾಗುತ್ತಾನೆ,

ಪ್ರಯಾಸದಿಂದವನ ಹಿಡಿದು ಸಾರಥಿಯಾಗಿಸಿದ ಅರ್ಜುನ ಕೌರವರನೆದುರಿಸುತ್ತಾನೆ.

 

ಆದಾಯ ಗಾಣ್ಡೀವಮಥ ಧ್ವಜಂ ಚ ಹನೂಮದಙ್ಕಂ ಸದರೋSಗ್ರತೋ ಗಾಃ ।

ನಿವರ್ತ್ತ್ಯ ಯುದ್ಧಾಯ ಯಯೌ ಕುರೂಂಸ್ತಾನ್ ಜಿಗ್ಯೇ ಸರ್ವಾನ್ ದ್ವೈರಥೇನೈವ ಸಕ್ತಾನ್ ॥೨೩.೪೨॥

ಅರ್ಜುನ ಗಾಂಡೀವ,ಹನುಮ ಚಿಹ್ನೆಯಧ್ವಜ, ಶಂಖ ಹೊಂದುತ್ತಾನೆ,

ಹಸುಗಳನ್ನು ವಿರಾಟನಗರದತ್ತ ತಿರುಗಿಸಿ ಯುದ್ಧಕ್ಕಾಗಿ ತೆರಳುತ್ತಾನೆ.

ದ್ವಂದ್ವಯುದ್ಧಕ್ಕೆ ಬಂದ ಕೌರವ ವೀರರನ್ನು ಅರ್ಜುನನು ಗೆಲ್ಲುತ್ತಾನೆ.

 

ಏಕೀಭೂತಾನ್ ಪುನರೇವಾನುಯಾತಾನ್ ಸಮ್ಮೋಹನಾಸ್ತ್ರೇಣ ವಿಮೋಹಯಿತ್ವಾ ।

ಜಗ್ರಾಹ ತೇಷಾಮುತ್ತರೀಯಾಣ್ಯೃತೇ ತು ಭೀಷ್ಮಸ್ಯ ವೇದಾಸ್ತ್ರಘಾತಂ ಸ ಏವ ॥೨೩.೪೩॥

ನಂತರ ಒಟ್ಟಿಗೆ ಎಲ್ಲರೂ ಸೇರಿ ಅರ್ಜುನನ ಮೇಲೆ

ಮಾಡುತ್ತಾರೆ ಆಕ್ರಮಣ,

ಅರ್ಜುನ ಅವರೆಲ್ಲರನ್ನು ಮೂರ್ಛೆ ಗೊಳಿಸುತ್ತಾನೆ ಬಿಟ್ಟು ಸಮ್ಮೋಹನ ಬಾಣ.

ಭೀಷ್ಮರೊಬ್ಬರನ್ನು ಬಿಟ್ಟು ಎಲ್ಲರ ಉತ್ತರೀಯಗಳ ಪಡಕೊಂಡ,

ಪ್ರಭಾವಕ್ಕೊಳಗಾಗದಿದ್ದ ಭೀಷ್ಮರ ತಾಕತ್ತಾಗಿತ್ತದು ಬಲು ಗಾಢ.

 

ವಿಧಾಯ ಭೀಷ್ಮಂ ವಿರಥಂ ಜಗಾಮ ತದಾ ಶ್ರುತ್ವಾ ಮತ್ಸ್ಯಪತಿರ್ಜ್ಜಿತಾನ್ ಕುರೂನ್ ।

ಮುಮೋದ ಪುತ್ರೇಣ ಜಿತಾ ಇತಿ ಸ್ಮ ತದಾSSಹ ಷಣ್ಢೇನ ಜಿತಾನ್ ಯುಧಿಷ್ಠಿರಃ ॥೨೩.೪೪॥

ಭೀಷ್ಮರನ್ನು ರಥಹೀನರನ್ನಾಗಿ ಮಾಡಿ ಅರ್ಜುನ ಹಿಂದಿರುಗಿದ,

ಕೌರವರು ತನ್ನ ಮಗನಿಂದ ಸೋತದ್ದು ಕೇಳಿ ವಿರಾಟರಾಜ ಬೀಗಿದ.

ಆಗ ಧರ್ಮರಾಯ : 'ಬೃಹನ್ನಳೆಯಿಂದಲೇ ಈ ವಿಜಯ' ಎಂದ.

 

ತದಾ ಕ್ರುದ್ಧಃ ಪ್ರಾಹರತ್ ತಂ ವಿರಾಟಃ ಸೋSಕ್ಷೇಣ ತದ್ ಭೀಮಧನಞ್ಜಯಾಭ್ಯಾಮ್ ।

ಶ್ರುತಂ ತದಾ ಕುಪಿತೌ ತೌ ನಿಶಾಮ್ಯ ನ್ಯವಾರಯತ್ ತಾವಪಿ ಧರ್ಮ್ಮಸೂನುಃ ॥೨೩.೪೫॥

ಆ ಮಾತನ್ನು ಕೇಳಿದ ವಿರಾಟರಾಜ ಮುನಿದ,

ಜೂಜಾಡುವ ದಾಳದಿಂದ ಧರ್ಮಜಗೆ ಹೊಡೆದ.

ಭೀಮಾರ್ಜುನರ ಕಿವಿ ಮುಟ್ಟಿತು ಆ ತಾಡನದ ಶಬ್ದ,

ಕೋಪಗೊಂಡ ಅವರಿಬ್ಬರನ್ನು ಧರ್ಮರಾಜ ತಡೆದ.

 

ನಿಜಸ್ವರೂಪೇಣ ಸಮಾಸ್ಥಿತಾನ್ ನೋ ಯದಿ ಸ್ಮ ನಾಸೌ ಪ್ರಣಿಪಾತಪೂರ್ವಕಮ್ ।

ಕ್ಷಮಾಪಯೇದ್ ವದ್ಧ್ಯ ಇತ್ಯಾತ್ಮರೂಪಂ ಸಮಾಸ್ಥಿತಾಸ್ತಸ್ಥುರಥಾಪರೇ ದಿನೇ ॥೨೩.೪೬॥

ಅವನಿಗಿಲ್ಲ ನಮ್ಮ ನಿಜರೂಪದ ಅರಿವು,

ಅದಾದಮೇಲೂ ಬಾಗದಿರೆ ಅವಗೆ ಸಾವು.

ಮರುದಿನ ತಮ್ಮ ನಿಜರೂಪದಿ ನಿಂತರು ತಾವು.

 

ತದಾ ವಿರಾಟಾಸನಮಾಸ್ಥಿತಂ ನೃಪಂ ಯುಧಿಷ್ಠಿರಂ ವೀಕ್ಷ್ಯ ವಿರಾಟ ಆಹ ।

ಕಿಮೇತದಿತ್ಯೂಚಿವಾನುತ್ತರೋSಸ್ಮೈ ತಾನ್ ಪಾಣ್ಡವಾನ್ ಗೋಗ್ರಹಣೇ ಚ ವೃತ್ತಮ್ ॥೨೩.೪೭॥

ವಿರಾಟನ ಸಿಂಹಾಸನ ಅಲಂಕರಿಸಿ ಕೂತಿದ್ದ ಯುಧಿಷ್ಠಿರ,

ಪ್ರಶ್ನಿಸಿದ ವಿರಾಟನಿಗೆ ತಿಳಿಹೇಳುತ್ತಾನೆ ಉತ್ತರಕುಮಾರ.

ಇವರು ಪಾಂಡವರು ಎಂದು ಉತ್ತರ ಹೇಳಿದ,

ಗೋಗ್ರಹಣ ಘಟನೆಗಳನ್ನು ತಂದೆಗೆ ವಿವರಿಸಿದ.

 

ತತೋ ವಿರಾಟೋ ಭಯಕಮ್ಪಿತಾಙ್ಗಃ ಪ್ರಣಮ್ಯ ಪಾರ್ತ್ಥಾಞ್ಛರಣಂ ಜಗಾಮ ।

ದದೌ ಚ ಕನ್ಯಾಮುತ್ತರಾಂ ಫಲ್ಗುನಾಯ ಪುತ್ರಾರ್ತ್ಥಮೇವ ಪ್ರತಿಜಗ್ರಾಹ ಸೋsಪಿ ॥೨೩.೪೮॥

ಭಯಗೊಂಡ ವಿರಾಟ ಪಾಂಡವರಿಗೆ ಮಾಡುತ್ತಾನೆ ನಮಸ್ಕಾರ,

ರಕ್ಷಕರಾಗವರ ಹೊಂದಿ ಅರ್ಜುನಗೊಪ್ಪಿಸುತ್ತಾನೆ ಉತ್ತರೆಯ ಕರ.

ಅರ್ಜುನ ತನ್ನ ಮಗನಿಗಾಗಿಯೇ ಎಂದು ಮಾಡಿದ ಅವಳ ಸ್ವೀಕಾರ.

No comments:

Post a Comment

ಗೋ-ಕುಲ Go-Kula